ಮಂಗಳೂರು : ದಕ್ಷಿಣ ಕನ್ನಡ, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅಡಿಕೆ ಬೆಳೆಗೆ ಮಾರಕವಾಗಿ ಪರಿಣಮಿಸಿರುವ ಎಲೆಚುಕ್ಕಿ, ಹಳದಿ ಎಲೆ ಹಾಗೂ ಕೊಳೆರೋಗಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ. ಲೋಕಸಭೆಯಲ್ಲಿ ನಿಯಮ 377ರ ಅಡಿಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಈ ಲಿಖಿತ ಉತ್ತರ ನೀಡಿದ್ದಾರೆ.
ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ICAR-CPCRI) ಮೂಲಕ ಎಲೆಚುಕ್ಕಿ ಹಾಗೂ ಹಳದಿ ಎಲೆ ರೋಗಗಳ ತಡೆಗೆ ತೀವ್ರ ಸಂಶೋಧನೆ ನಡೆಸಿ, ಸಮಗ್ರ ರೋಗ ನಿರ್ವಹಣಾ ಪದ್ಧತಿಯನ್ನು ರೂಪಿಸಲಾಗಿದೆ. ಶಿರಸಿ, ಸಿದ್ದಾಪುರ, ಬೆಳ್ತಂಗಡಿ ಮತ್ತು ಸುಳ್ಯ ಸೇರಿದಂತೆ ಒಟ್ಟು ಏಳು ಕ್ಲಸ್ಟರ್ಗಳಲ್ಲಿ ಈ ನೂತನ ವೈಜ್ಞಾನಿಕ ಕ್ರಮಗಳನ್ನು ಪ್ರಾತ್ಯಕ್ಷಿಕೆಯಾಗಿ ಜಾರಿಗೊಳಿಸಲಾಗಿದ್ದು, ರೋಗದ ತೀವ್ರತೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ.
ಕೊಳೆರೋಗ ತಡೆಗೆ ಮುಂಗಾರುಪೂರ್ವ ಹಾಗೂ ಮುಂಗಾರಿನ ವೇಳೆ ಬಳಸಬೇಕಾದ ಸೂಕ್ತ ಶಿಲೀಂಧ್ರನಾಶಕಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳನ್ನು ಅನುಸರಿಸಿದ ತೋಟಗಳಲ್ಲಿ ಬೆಳೆ ಇಳುವರಿ ಸುಧಾರಿಸಿದೆ. ಅಲ್ಲದೆ, ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿಯ ಶಿಫಾರಸುಗಳಂತೆ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ (MIDH) ಮತ್ತು ಅಡಿಕೆ ಹಾಗೂ ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ರೈತರಲ್ಲಿ ಜಾಗೃತಿ ಮತ್ತು ಸಮುದಾಯ ಆಧಾರಿತ ರೋಗ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರೈತರು ಸಮನ್ವಯದಿಂದ ಶಿಫಾರಸು ಮಾಡಿದ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ICAR-CPCRI ಸಂಸ್ಥೆಯು ಮುಂಬರುವ ದಿನಗಳಲ್ಲೂ ನಿರಂತರ ಸಂಶೋಧನೆ ನಡೆಸಿ ಅಡಿಕೆ ಬೆಳೆಗಾರರಿಗೆ ಅಗತ್ಯ ತಾಂತ್ರಿಕ ಬೆಂಬಲ ಒದಗಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









