ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25ರವರೆಗೆ ಒಟ್ಟು 87 ಹೆಚ್1ಎನ್1 (ಇನ್ಫ್ಲೂಯೆಂಜಾ) ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ವಿನಂತಿಸಿದ್ದಾರೆ. ಮಂಗಳೂರಿನ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಮೀಕ್ಷಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ 60 ಪ್ರಕರಣಗಳು ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ 14, ಪುತ್ತೂರಿನಲ್ಲಿ 7, ಬೆಳ್ತಂಗಡಿಯಲ್ಲಿ 5 ಹಾಗೂ ಸುಳ್ಯದಲ್ಲಿ 1 ಪ್ರಕರಣಗಳು ದಾಖಲಾಗಿವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ತೀರ್ಮಾನದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಗೊಂದಲಗಳನ್ನು ನಿವಾರಿಸಲು ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ‘ಹಂದಿ ಜ್ವರ’ ಎಂದು ಕರೆಯಲ್ಪಡುವ ಈ ಇನ್ಫ್ಲೂಯೆಂಜಾ ಸೋಂಕು ಚಳಿ ಹಾಗೂ ಮಳೆಗಾಲದ ಅವಧಿಯಲ್ಲಿ (ಜನವರಿ-ಮಾರ್ಚ್ ಮತ್ತು ಜುಲೈ-ಸೆಪ್ಟೆಂಬರ್) ಹೆಚ್ಚಾಗಿ ಕಂಡುಬರುತ್ತದೆ. ಸೋಂಕಿತರ ಉಸಿರಾಟದ ಹನಿಗಳು, ಕೆಮ್ಮು, ಸೀನು ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ನಿಕಟ ಸಂಪರ್ಕದಿಂದಾಗಿ ಈ ವೈರಸ್ ವೇಗವಾಗಿ ಹರಡುತ್ತದೆ.
ಸಮಗ್ರ ಆರೋಗ್ಯ ಮಾಹಿತಿ ವೇದಿಕೆ (IHIP) ನೀಡಿರುವ ಅಂಕಿ-ಅಂಶಗಳ ಪ್ರಕಾರ, 2026ರ ಜನವರಿಯಿಂದ ಆಗಸ್ಟ್ 25ರವರೆಗೆ 87 ದೃಢೀಕೃತ ಪ್ರಕರಣಗಳು ವರದಿಯಾಗಿವೆ. ಕಳೆದ 2025ರ ಇದೇ ಅವಧಿಯಲ್ಲಿ 71 ಪ್ರಕರಣಗಳು ದಾಖಲಾಗಿದ್ದವು (2025ರಲ್ಲಿ ಒಟ್ಟು 207 ಮತ್ತು 2024ರಲ್ಲಿ 208 ಪ್ರಕರಣಗಳು ಕಂಡುಬಂದಿದ್ದವು). ಪ್ರಸ್ತುತ ಜಿಲ್ಲೆಯಾದ್ಯಂತ ಇನ್ಫ್ಲೂಯೆಂಜಾ ಮಾದರಿಯ ಅನಾರೋಗ್ಯ (ILI) ಮತ್ತು ತೀವ್ರ ಮಾದರಿಯ ಉಸಿರಾಟದ ಸೋಂಕಿನ (SARI) ಕಣ್ಗಾವಲು ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯು ಮತ್ತಷ್ಟು ಚುರುಕುಗೊಳಿಸಿದೆ.
ಆರಂಭಿಕ ಹಂತದಲ್ಲೇ ರೋಗಪತ್ತೆ ಮತ್ತು ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪ್ರಮುಖ ಕಣ್ಗಾವಲು ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಜ್ವರ, ಕೆಮ್ಮು, ಗಂಟಲು ಉರಿ, ತಲೆನೋವು ಮತ್ತು ಮೈಕೈ ನೋವು ಇನ್ಫ್ಲೂಯೆಂಜಾದ ಸಾಮಾನ್ಯ ಲಕ್ಷಣಗಳಾಗಿದ್ದು, ಇವು ತೀವ್ರಗೊಂಡರೆ ನ್ಯುಮೋನಿಯಾ ಅಥವಾ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ ತಕ್ಷಣವೇ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









