ಮಂಗಳೂರು : ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ನಕಲಿ ಅಧಿಕಾರಿಯಂತೆ ನಟಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮೂಲತಃ ಕೇರಳದ ನಿವಾಸಿಯಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಲಕ್ನೋದಲ್ಲಿ ನೆಲೆಸಿದ್ದ ಶ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ ಅಲಿಯಾಸ್ ಆಂಟನಿ (64) ಎಂದು ಗುರುತಿಸಲಾಗಿದೆ.
ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಹಣಕಾಸು ವಿವಾದ, ಬ್ಯಾಂಕ್ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿಕೊಂಡವರನ್ನೇ ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದ ಈತನನ್ನು ಮತ್ತು ಆತನ 8 ಜನ ಸಹಚರರನ್ನು ಕದ್ರಿ ಪೊಲೀಸರು 2019ರ ಆಗಸ್ಟ್ 16ರಂದು ಪಂಪ್ವೆಲ್ನ ಲಾಡ್ಜ್ ಒಂದರಲ್ಲಿ ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯು ವಿಚಾರಣೆಗೆ ಹಾಜರಾಗದೆ ಪರಾರಿಯಾಗಿದ್ದ. ಈತನ ಪತ್ತೆಗೆ ಉಳ್ಳಾಲ ಠಾಣೆ ಪ್ರಕರಣದಲ್ಲಿ 17 ಬಾರಿ ಹಾಗೂ ಮಂಗಳೂರು ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಹೊರಡಿಸಲಾಗಿತ್ತು.
ಅಪರಾಧ ಎಸಗಿದ ಬಳಿಕ ಸ್ಥಳ ಮತ್ತು ಹೆಸರು ಬದಲಾಯಿಸುವ ಅಭ್ಯಾಸ ಹೊಂದಿದ್ದ ಈತ, ಆಂಟನಿ, ರಾಹುಲ್ ಪೀಟರ್, ರಾಜೇಶ್ ರಾಬಿನ್ಸನ್, ರಾಯ್ ಜೇಕಬ್ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ನಕಲಿ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದ. ಈತನ ವಿರುದ್ಧ ಕರ್ನಾಟಕ, ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶಗಳಲ್ಲಿ ಒಟ್ಟು 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ‘ರಾಹುಲ್ ಪೀಟರ್’ ಎಂಬ ಹೆಸರಿನಲ್ಲಿ 2001ರಿಂದಲೇ ಈತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಪ್ರಸ್ತುತ ಬಂಧಿತ ಆರೋಪಿಯನ್ನು ಮುಂದಿನ ಕಾನೂನು ನಡಾವಳಿಗಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









