ಮಂಗಳೂರು : ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಮಹತ್ವದ ನಿರ್ಣಯ ಕೈಗೊಳ್ಳಬೇಕೆಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತುಳುನಾಡಿನ ಜನರ ದಶಕಗಳ ಈ ಒಕ್ಕೊರಲ ಬೇಡಿಕೆಯನ್ನು ಈಡೇರಿಸಲು ಸಂಪುಟ ಸಭೆಯೇ ಸೂಕ್ತ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾವು ಶಾಸಕರಾದಾಗಿನಿಂದಲೂ ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿರುವುದಾಗಿ ತಿಳಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಳು ಲಿಪಿಯ ಶಾಸನಗಳು, ಪುರಾತನ ತಾಳೆಓಲೆಗಳು, ಪಾಡ್ದನಗಳು, ದೈವಾರಾಧನೆಯ ನುಡಿಗಳು, ದೇವಸ್ಥಾನ-ದೈವಸ್ಥಾನಗಳ ಪಾರಂಪರಿಕ ದಾಖಲೆಗಳು, ತುಳು ಸಾಹಿತ್ಯ, ಕ್ಯಾಲೆಂಡರ್ ಹಾಗೂ ಪತ್ರಿಕೆಗಳು ಸೇರಿದಂತೆ ಹಲವು ಐತಿಹಾಸಿಕ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ಸಚಿವರಾಗಿದ್ದ ಸುನಿಲ್ ಕುಮಾರ್ ಕಾರ್ಕಳ ಅವರು ಡಾ. ಮೋಹನ್ ಆಳ್ವ ನೇತೃತ್ವದ ಸಮಿತಿಯನ್ನು ರಚಿಸಿದ್ದರು. ಆದರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಈ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷಿಸಿರುವುದು ವಿಷಾದನೀಯ ಎಂದರು.
ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಿಸುವ ಹೋರಾಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕ್ರಿಯೆಗಳು ಹಿಂದಿನ ಸರ್ಕಾರದ ಅವಧಿಯಲ್ಲೇ ಪೂರ್ಣಗೊಂಡಿದ್ದು, ಪ್ರಸ್ತುತ ಅಂತಿಮ ಹಂತದ ನಿರ್ಧಾರ ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಸರ್ಕಾರ ಈ ಸುದೀರ್ಘ ಬೇಡಿಕೆಗೆ ತಾರ್ಕಿಕ ಅಂತ್ಯ ಹಾಡಿ, ತುಳು ಭಾಷೆಗೆ ಸೂಕ್ತ ಗೌರವ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









