ಮಂಗಳೂರು : ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಅಂಬಾನಗರ, ಅರೆಕೆರೆ ಬೈಲು, ಜಪ್ಪು, ಮಂಗಳೂರು ವತಿಯಿಂದ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಮಾಜ ಸೇವಾ ಚಟುವಟಿಕೆಗಳ ಸ್ಮರಣಾರ್ಥ ಹಾಗೂ “ಅವೇಕ್ ಕುಡ್ಲ” ಅಭಿಯಾನದ ಮುಂದಿನ ರೂಪುರೇಷೆಗಳನ್ನು ರೂಪಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆಯ ರೆಡ್ಕ್ರಾಸ್ ಸೆಂಟಿನರಿ ಬಿಲ್ಡಿಂಗ್ನ ಪ್ರೇರಣಾ ಅಡಿಟೋರಿಯಂನಲ್ಲಿ ನಡೆಯಿತು.
2015ರಿಂದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಮಂಗಳೂರಿನ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಸಂಚಾರ ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷ “ಅವೇಕ್ ಕುಡ್ಲ” ಎಂಬ ವಿಶೇಷ ಪರಿಕಲ್ಪನೆಯನ್ನು ಆರಂಭಿಸಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾದೇವಿ, ಹೊಯಿಗೆ ಬಜಾರ್ ಮತ್ತು ಬೋಳಾರ ವಾರ್ಡ್ಗಳಲ್ಲಿ ಮಾದರಿ ವಾರ್ಡ್ ಯೋಜನೆಯ ಮೂಲಕ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ “ಅವೇಕ್ ಕುಡ್ಲ” ಅಭಿಯಾನವನ್ನು ಮಂಗಳೂರು ನಗರದಾದ್ಯಂತ ವಿಸ್ತರಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ.
ಟ್ರಸ್ಟ್ನ ಸ್ವಯಂಸೇವಕರು ಗುಜ್ಜರಕೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮದಾನ, ಸ್ವಚ್ಛತಾ ಕಾರ್ಯ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಸ್ವಚ್ಛತೆ ಕಾಪಾಡುವುದು ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು ಎಂಬ ಸಂದೇಶವನ್ನು ಜನರಲ್ಲಿ ಮೂಡಿಸುವಲ್ಲಿ ಈ ಕಾರ್ಯಗಳು ಪ್ರಮುಖ ಪಾತ್ರ ವಹಿಸಿವೆ.
ಕಾರ್ಯಕ್ರಮದ ಮೊದಲ ಭಾಗವಾಗಿ “ಬೆಳೆಯುತ್ತಿರುವ ನಗರದ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿನ ಸವಾಲುಗಳು – ಪರಿಹಾರ ಕಂಡುಕೊಳ್ಳುವಲ್ಲಿ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಪಾತ್ರ” ಎಂಬ ವಿಷಯದ ಕುರಿತು ವಿಶೇಷ ಸಂವಾದ ನಡೆಯಿತು. ಟ್ರಸ್ಟ್ನ ತಜ್ಞರ ಸಮಿತಿಯ ಸದಸ್ಯರಾದ ಶ್ರೀಮತಿ ಮಂಜುಳಾ ಗುಡ್ಡೆಹಿತ್ಲು ಅವರು ಸ್ವಾಗತ ಹಾಗೂ ಪ್ರಸ್ತಾವನೆ ನೆರವೇರಿಸಿದರು. ಸಂವಾದಕ್ಕೂ ಮುನ್ನ “ಅವೇಕ್ ಕುಡ್ಲ” ಪರಿಕಲ್ಪನೆಯ ಕಿರು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಹುಲ್ ರತ್ನಂ ಪಾಂಡೆ, IAS ಹಾಗೂ ಮಂಗಳೂರು ನಗರ ಪೊಲೀಸ್ನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಕೆ. ರವಿಶಂಕರ್, KSPS ಅವರು ಸಂವಾದಕರಾಗಿ ಭಾಗವಹಿಸಿ, ಮಂಗಳೂರಿನ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಅವುಗಳಿಗೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯತೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂವಾದವನ್ನು ಶ್ರೀ ಅಭಿಷೇಕ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕರು, ರೇಡಿಯೋ ಸಾರಂಗ್, ಮಂಗಳೂರು ಅವರು ನಡೆಸಿಕೊಟ್ಟರು.
ನಂತರ ನಡೆದ ಮುಖ್ಯ ಕಾರ್ಯಕ್ರಮವು ದೀಪ ಪ್ರಜ್ವಲನೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಶ್ರೀ ಉಮಾನಾಥ್ ಕೋಟೆಕಾರ್ ಅವರು ಟ್ರಸ್ಟಿನ ಹತ್ತು ವರ್ಷದ ಪಯಣದ ಕುರಿತು ಸ್ವಾಗತ ಮತ್ತು ಪ್ರಸ್ತಾವನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ನ ಹತ್ತು ವರ್ಷಗಳ ಸಮಾಜ ಸೇವಾ ಪಯಣ, ವಿವಿಧ ಯೋಜನೆಗಳು, ಸ್ವಚ್ಛತಾ ಕಾರ್ಯಗಳು, ಪರಿಸರ ಸಂರಕ್ಷಣಾ ಚಟುವಟಿಕೆಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ “ಅವೇಕ್ ಕುಡ್ಲ” ಅಭಿಯಾನದ ಮೂಲಕ ಕೈಗೊಂಡಿರುವ ಕಾರ್ಯಗಳ ಅವಲೋಕನವನ್ನು ನೀಡಲಾಯಿತು.
ಟ್ರಸ್ಟ್ನ ಕಳೆದ ಹತ್ತು ವರ್ಷಗಳ ಸಾಮಾಜಿಕ ಚಟುವಟಿಕೆಗಳು ಮತ್ತು ಸೇವಾ ಪಯಣವನ್ನು ದಾಖಲಿಸಿರುವ ಟ್ರಸ್ಟ್ ಆಲ್ಬಮ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಟ್ರಸ್ಟ್ನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಪ್ರಮುಖ ಕೊಡುಗೆ ನೀಡಿದ ಪ್ರಮುಖರನ್ನು ಗುರುತಿಸಿ ಗೌರವಿಸಲಾಯಿತು. ಕಳೆದ ಒಂದು ದಶಕದಲ್ಲಿ ಟ್ರಸ್ಟ್ನ ಕಾರ್ಯಗಳಿಗೆ ಸಹಕರಿಸಿದ ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಮಠ, ಮಂಗಳೂರಿನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿಯಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ಸಾರ್ವಜನಿಕರು ತಮ್ಮ ನಗರವನ್ನು ಸ್ವಚ್ಛವಾಗಿ ಹಾಗೂ ಸುಸಜ್ಜಿತವಾಗಿ ಇಟ್ಟುಕೊಳ್ಳುವಲ್ಲಿ ಜವಾಬ್ದಾರಿಯಿಂದ ಭಾಗವಹಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ CA ನಿತಿನ್ ಜೆ. ಶೆಟ್ಟಿ, ಪಾಲುದಾರರು, ನಿತಿನ್ ಜೆ. ಶೆಟ್ಟಿ & ಕೋ., ಮಂಗಳೂರು, ಶ್ರೀ ಪುಷ್ಪರಾಜ್ ಬಿ.ಎನ್., ಅಧ್ಯಕ್ಷರು, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಮಂಗಳೂರು, ಡಾ. ಸತೀಶ್ ರಾವ್, ಖ್ಯಾತ ಮನೋವೈದ್ಯರು, ಹಾಗೂ ಶ್ರೀ ಚಿತ್ತರಂಜನ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಅವರು ಅತಿಥಿಗಳಾಗಿ ಭಾಗವಹಿಸಿ, ಟ್ರಸ್ಟ್ನ ಹತ್ತು ವರ್ಷಗಳ ಸಮಾಜ ಸೇವಾ ಕಾರ್ಯಗಳಿಗೆ ಶುಭಾಶಯಗಳನ್ನು ಸಲ್ಲಿಸಿದರು ಹಾಗೂ ಮುಂದಿನ ದಿನಗಳಲ್ಲಿ “ಅವೇಕ್ ಕುಡ್ಲ” ಅಭಿಯಾನಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅ. ಸೀತಾರಾಮ್, ಅಧ್ಯಕ್ಷರು, ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಮಂಗಳೂರು ಅವರು ವಹಿಸಿದ್ದರು. ಅವರು ಟ್ರಸ್ಟ್ನ ಕಳೆದ ಹತ್ತು ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ತಿಳಿಸಿದರು. ಮಂಗಳೂರು ನಗರದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, “ನಮ್ಮ ಊರು – ನಮ್ಮ ಹೆಮ್ಮೆ, ನಮ್ಮ ಪರಿಸರ – ನಮ್ಮ ಜವಾಬ್ದಾರಿ” ಎಂಬ ಆಶಯದೊಂದಿಗೆ ಟ್ರಸ್ಟ್ ತನ್ನ ಸೇವಾ ಕಾರ್ಯಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.
ಡಾ. ಪ್ರವೀಣ್ ಕೆ., ಟ್ರಸ್ಟ್ನ ಉಪಾಧ್ಯಕ್ಷರು ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಅಭಿಷೇಕ್ ಶೆಟ್ಟಿ ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ತಜ್ಞರ ಸಮಿತಿಯ ಸದಸ್ಯರಾದ ಡಾ. ನಯನ ಪಕ್ಕಳ, ಖಜಾಂಚಿ ಶ್ರೀ ರಾಮ ದೇವಾಡಿಗ, ಕಾರ್ಯಕ್ರಮ ಸಂಯೋಜಕರಾದ ಶ್ರೀ ಪುನೀತ್ ಪೂಜಾರಿ, ವಾರ್ಡ್ ಸಂಯೋಜಕಿ ಶ್ರೀಮತಿ ಸರಿತಾ, ಕಚೇರಿ ಸಂಯೋಜಕರಾದ ಕು. ನೇಹಾ, ಕು. ನಿಶಾ ಸೇರಿದಂತೆ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.
ಕಳೆದ ಹತ್ತು ವರ್ಷಗಳ ಸೇವಾ ಪಯಣವನ್ನು ಮುಂದುವರಿಸಿಕೊಂಡು “ಅವೇಕ್ ಕುಡ್ಲ” ಅಭಿಯಾನವನ್ನು ಮಂಗಳೂರು ನಗರದಾದ್ಯಂತ ವಿಸ್ತರಿಸುವ ಸಂಕಲ್ಪವನ್ನು ಟ್ರಸ್ಟ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿತು. ತ್ಯಾಜ್ಯ ನಿರ್ವಹಣೆ, ಸಂಚಾರ ವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ನಗರದ ಇತರ ಮೂಲಭೂತ ಸಮಸ್ಯೆಗಳ ಪರಿಹಾರದಲ್ಲಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜೊತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಕೈಜೋಡಿಸಬೇಕು ಎಂಬ ಸಂದೇಶವನ್ನು ಕಾರ್ಯಕ್ರಮ ನೀಡಿತು. “ನಮ್ಮ ಊರು – ನಮ್ಮ ಹೆಮ್ಮೆ, ನಮ್ಮ ಪರಿಸರ – ನಮ್ಮ ಜವಾಬ್ದಾರಿ” ಎಂಬ ಪರಿಕಲ್ಪನೆಯೊಂದಿಗೆ ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ಸ್ವಚ್ಛ, ಸುಂದರ, ಸುರಕ್ಷಿತ ಹಾಗೂ ಸುಗಮ ಮಂಗಳೂರನ್ನು ನಿರ್ಮಿಸಲು ಸಾಧ್ಯ ಎಂದು ಟ್ರಸ್ಟ್ ಕರೆ ನೀಡಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









