ಮಂಗಳೂರು : ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆಗುಡ್ಡೆ ರಕ್ಷಿತಾರಣ್ಯ ಪ್ರದೇಶಕ್ಕೆ ಸೂಕ್ತ ಪೂರ್ವಾಪರ ಅನುಮತಿಯಿಲ್ಲದೆ ಅಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದ ಇಬ್ಬರು ಯೂಟ್ಯೂಬರ್ಗಳನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರದೇಶವು ಎಸ್ಐಟಿ ತನಿಖೆಯ ಸಂದರ್ಭದಲ್ಲಿ ಶವ ಹೂತಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಗೆತ ನಡೆದು ತೀವ್ರ ಸಂಚಲನ ಸೃಷ್ಟಿಸಿತ್ತು. ಆ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದ ತನಿಖಾ ತಂಡ, ಇದು ಧರ್ಮಸ್ಥಳದ ವಿರುದ್ಧ ಹೆಣೆಯಲಾದ ಷಡ್ಯಂತ್ರ ಎಂದು ಸ್ಪಷ್ಟಪಡಿಸಿತ್ತು. ಇದೀಗ ಅದೇ ಷಡ್ಯಂತ್ರ ಪ್ರಕರಣದ ಆರೋಪಿಗಳಾಗಿದ್ದ ಯೂಟ್ಯೂಬರ್ ಅಭಿಷೇಕ್ ಹಾಗೂ ಬೆಂಗಳೂರಿನ ವೆಬ್ ಪತ್ರಕರ್ತ ಶ್ರೇಯಸ್ ಎಂಬುವವರು ಮತ್ತೆ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರದ ಶೋಧ ನಡೆಸುವಂತೆ ವಿಡಿಯೋ ಮಾಡಲು ಬಂದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಇತ್ತೀಚೆಗಷ್ಟೇ ಊರಿಗೆ ಮರಳಿದ್ದು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಪಡೆದಿದ್ದರು. ಇದರ ಬೆನ್ನಲ್ಲೇ ಮತ್ತೆ ಸಕ್ರಿಯವಾಗಿರುವ ಯೂಟ್ಯೂಬರ್ ಪಡೆ ಬಂಗ್ಲೆಗುಡ್ಡ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಲು ಮುಂದಾಗಿತ್ತು. ಪ್ರಸ್ತುತ ಈ ಪ್ರದೇಶವು ಮೀಸಲು ಅರಣ್ಯವಾಗಿರುವುದರಿಂದ ಅಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಪರವಾನಗಿ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸಿ, ಮುಂದಿನ ಕಾನೂನು ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಇಲಾಖೆಯು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೆತ್ತಿಕೊಂಡಿದೆ. ಇನ್ನು ಠಾಣೆಗೆ ಬಂದ ಯುವಕರಿಗೆ ತಮ್ಮ ಮೇಲೆ ಯಾವುದೇ ಹಲ್ಲೆ ನಡೆದಿದ್ದಲ್ಲಿ ದೂರು ನೀಡಲು ಪೊಲೀಸರು ಸೂಚಿಸಿದ್ದು, ಅವರು ಪರಿಶೀಲಿಸಿ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಯಾವುದೇ ಹಲ್ಲೆ ದೂರು ದಾಖಲಾಗಿಲ್ಲ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









