ಉಜಿರೆ: ಜಪಾನಿನ ಆರ ಜಪಾನಿ ವಿದ್ಯಾರ್ಥಿಗಳ ತಂಡವೊಂದು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಯೋಜನೆಯ ಅಂಗವಾಗಿ ಉಜಿರೆಯ ಎಸ್.ಡಿ.ಎಂ. ಸಂಸ್ಥೆಗೆ ಆಗಮಿಸಿದ್ದು, ವಿವಿಧ ನಿಕಾಯಗಳು ಹಾಗೂ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಹಲವು ವಿಚಾರಗಳನ್ನು ತಿಳಿದುಕೊಂಡಿದೆ.
ತಮ್ಮ ಪ್ರವಾಸದ ಆರಂಭದಲ್ಲಿ ಧರ್ಮಸ್ಥಳಕ್ಕೆ ತೆರಳಿದ ಈ ಯುವ ಪ್ರತಿನಿಧಿಗಳು, ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅಮ್ಮಾವರಾದ ಹೇಮಾವತಿ ವಿ. ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದದ ಜೊತೆಗೆ ಮಹತ್ವದ ಮಾರ್ಗದರ್ಶನ ಪಡೆದರು. ಬಳಿಕ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಬಾಹುಬಲಿ ಬೆಟ್ಟ, ಜೈನ ಬಸದಿ, ಅನ್ನಪೂರ್ಣ ಚೋಲ್ಟ್ರಿ ಸೇರಿದಂತೆ ‘ಮಂಜೂಷಾ’ ವಸ್ತುಸಂಗ್ರಹಾಲಯ ಹಾಗೂ ಅಪರೂಪದ ವಿಂಟೇಜ್ ಕಾರುಗಳ ಗ್ಯಾರೇಜ್ ಅನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸಿದರು.
ಈ ಆರು ಜನರ ತಂಡದಲ್ಲಿ ಗೊಟೊ ರೈಯೋಹೆ ಹಾಗೂ ಇಕೆಡಾ ಅಕಾರಿ ಎಂಬ ಇಬ್ಬರು ವಿದ್ಯಾರ್ಥಿಗಳು ಮುಂದಿನ ಒಂದು ತಿಂಗಳ ಕಾಲ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿಯೇ ಉಳಿದುಕೊಂಡು ವಿಶೇಷ ಶೈಕ್ಷಣಿಕ ಅಧ್ಯಯನ ಕೈಗೊಳ್ಳಲಿದ್ದಾರೆ.
ವಿದೇಶಿ ವಿದ್ಯಾರ್ಥಿಗಳ ಈ ಶೈಕ್ಷಣಿಕ ಪ್ರವಾಸಕ್ಕೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಪ್ರೊ. ಎಸ್. ಸತೀಶ್ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ಸಿ.ಇ.ಒ. ಪೂರನ್ವರ್ಮ ಹಾಗೂ ಮನೋರಮಾ ಭಟ್ ಅವರುಗಳು ಅಗತ್ಯ ಮಾಹಿತಿ ನೀಡುವ ಮೂಲಕ ಪ್ರೋತ್ಸಾಹಿಸಿದರು.
ಈ ವಿನಿಮಯ ಯೋಜನೆಯ ಭಾಗವಾಗಿ ಈಗಾಗಲೇ ಉಜಿರೆ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಮಾಲಿನಿ ಅಂಚನ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಸಂಜನಾ ಮತ್ತು ಸಿಂಚನಾ ಜಪಾನ್ಗೆ 11 ದಿನಗಳ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಅವರು ನಮ್ಮ ಕರಾವಳಿಯ ಹೆಮ್ಮೆಯ ಯಕ್ಷಗಾನ, ಜಾನಪದ ಕಲೆಗಳು ಮತ್ತು ಭಾರತೀಯ ಜೀವನಶೈಲಿ ಹಾಗೂ ಸಂಸ್ಕೃತಿಯನ್ನು ಜಪಾನ್ ಜನತೆಗೆ ಮನಮುಟ್ಟುವಂತೆ ಪರಿಚಯಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









