ಮಂಗಳೂರು : ಮಹಿಳೆಯರಲ್ಲಿರುವ ಸಾಹಿತ್ಯಿಕ ಪ್ರತಿಭೆಯ ಅನಾವರಣಕ್ಕಾಗಿ ಹೊಯ್ಗೆಬೈಲ್, ಉರ್ವದ ಸೌಜನ್ಯ ಮಹಿಳಾ ಮಂಡಲದಲ್ಲಿ ‘ನನ್ನ ಭಾವ ನನ್ನ ಬರಹ’ ಚುಟುಕು ಮಾಹಿತಿ ಕಾರ್ಯಾಗಾರ ದಿನಾಂಕ 30-09-2026ರಂದು ಬೈಕಾಡಿ ಮನೆ ‘ಮಂಜೂಷಾ’ದಲ್ಲಿ ನಡೆಯಿತು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ವಾಣಿಜ್ಯ ತೆರಿಗೆ ಸಲಹೆಗಾರರೂ ಆಗಿರುವ ಶ್ರೀ ಎನ್. ಸುಬ್ರಾಯ ಭಟ್ ಇವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ರಚನೆಯ ಸರಳವಾದ ಚುಟುಕುಗಳನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸುತ್ತಾ “ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ನಾವು ದಿನನಿತ್ಯ ನಮ್ಮ ದೃಷ್ಟಿಯನ್ನು ಅಕ್ಕಪಕ್ಕ ಹರಿಸಿದರೆ ಹಾಸ್ಯ, ವಿಡಂಬನೆ ಮತ್ತು ವ್ಯಂಗ್ಯದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಚುಟುಕುಗಳ ಸೃಷ್ಟಿಯಾಗುತ್ತವೆ.” ಎಂಬ ಪ್ರೋತ್ಸಾಹದ ಮಾತುಗಳನ್ನಾಡಿದರು. ಸುಮಾರು ನಾಲ್ಕು ಮಂದಿ ಸದಸ್ಯೆಯರು ಸ್ಥಳದಲ್ಲಿಯೇ ಚುಟುಕು ರಚಿಸುವ ಮೂಲಕ ‘ನನ್ನ ಭಾವ ನನ್ನ ಬರಹ’ ಕಾರ್ಯಾಗಾರ ಯಶಸ್ವಿಯಾಯಿತು. ಇದೇ ಸಂದರ್ಭದಲ್ಲಿ ಶ್ರೀ ಎನ್. ಸುಬ್ರಾಯ ಭಟ್ ಇವರನ್ನು ಗೌರವಿಸಲಾಯಿತು.
ಮಂಡಲದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷೆ ಕೆ.ಎ. ರೋಹಿಣಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಅತಿಥಿ ಪರಿಚಯ ಮಾಡಿ, ಸ್ವಾಗತಿಸಿದರು. ಅಧ್ಯಕ್ಷೆ ರಮಾ ಎನ್. ಇವರ ಅಧ್ಯಕ್ಷೀಯ ಮಾತುಗಳ ಬಳಿಕ ಕಾರ್ಯದರ್ಶಿ ರಾಜೇಶ್ವರಿ ಎನ್. ರಾವ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಜಯಲಕ್ಷ್ಮಿ ಬಾಲಕೃಷ್ಣ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









