ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದ (ಸಬ್ ಜೈಲು) ಒಳಗೆ ನಡೆದಿದ್ದ ವಿಚಾರಣಾಧೀನ ಕೈದಿ, ರೌಡಿಶೀಟರ್ ಮಾಡೂರು ಯೂಸುಫ್ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ತಡವಿನ ಜೈಲು ಶಿಕ್ಷೆ ಹಾಗೂ ತಲಾ ₹76,000 ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ. ನ್ಯಾಯಾಧೀಶರಾದ ಜಗದೀಶ್ ವಿ.ಎನ್ ಅವರು ಈ ಮಹತ್ವದ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಸೂರಿಂಜೆಯ ಲಿತೇಶ್ ಪೂಜಾರಿ, ಸುರತ್ಕಲ್ನ ಶೋಭರಾಜ್, ಶಿಬರೂರಿನ ಯುವರಾಜ್, ಉಳಾಯಿಬೆಟ್ಟುವಿನ ಪ್ರದೀಪ್ ಹಾಗೂ ಸುಳ್ಯ ಬಾಳುಗೋಡಿನ ಉಮೇಶ್ ಕೊಂಬಾರು ಎಂಬವರ ಮೇಲಿನ ಕೊಲೆ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2026ರ ಜನವರಿ 28ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಾಗೃಹದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಾಡೂರು ಯೂಸುಫ್ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಕುರಿತು ಅಂದಿನ ಎಸಿಪಿ ತಿಲಕಚಂದ್ರ ಅವರು ಸುದೀರ್ಘ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆಯ ನಂತರ ಐವರಿಗೆ ಶಿಕ್ಷೆಯಾಗಿದ್ದರೆ, ಪ್ರಕರಣದಲ್ಲಿದ್ದ ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಲತೀಶ್ ಹಾಗೂ ವಿಚಾರಣೆ ಹಂತದಲ್ಲೇ ಮೃತಪಟ್ಟ ಸತೀಶ್ ಪೂಜಾರಿ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮೋಹನ್ ಅವರು ಸುದೀರ್ಘ ವಾದ ಮಂಡಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









