ಮಂಗಳೂರು : ಜನರು ನಿತ್ಯ ಬಳಸುವ ಅಡುಗೆ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇದರ ಹಿಂದೆ ದೈತ್ಯ ಮಾಫಿಯಾ ಕಾರ್ಯಾಚರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಇಂತಹ ಕಲ್ಮಷಯುಕ್ತ ಆಹಾರ ಸೇವನೆಯಿಂದ ಸಾರ್ವಜನಿಕರಲ್ಲಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿದ್ದು, ಇದು ಸಾಮಾನ್ಯ ಅಪರಾಧಗಳಿಗಿಂತಲೂ ಅತ್ಯಂತ ಭೀಕರವಾಗಿದೆ. ಆದ್ದರಿಂದ ಆಹಾರ ಇಲಾಖೆಯು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸುದೀರ್ಘವಾಗಿ ಮಾತನಾಡಿದರು.
ಅಡುಗೆ ಎಣ್ಣೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಪ್ಯಾರಾಫಿನ್ ಬೆರೆಸುವ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಹಾಲಿನ ಪುಡಿಗೆ ಯೂರಿಯಾ ಮತ್ತು ಗೆಣಸಿನ ಹುಡಿಯನ್ನು ಮಿಶ್ರಣ ಮಾಡಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇಂತಹ ಜೀವಹಿಂಸಕ ದಂಧೆಯನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತೊಗೆಯುವವರೆಗೆ ವಿಶ್ರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು, ಈವರೆಗೆ ಇಲಾಖೆಯಿಂದ ನಡೆಸಲಾದ ದಾಳಿಗಳು ಹಾಗೂ ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ಆದೇಶಿಸಿದರು. ಇದೇ ವೇಳೆ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿರುವ 17 ಹಾಸ್ಟೆಲ್ಗಳನ್ನು ಸ್ವಂತ ಕಟ್ಟಡಗಳಿಗೆ ಶೀಘ್ರ ಸ್ಥಳಾಂತರಿಸಲು ಸೂಚಿಸಿದ ಅವರು, ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಾಗ ಖರೀದಿಸಲು ಅಥವಾ ಪಾಲಿಕೆಯಿಂದ ಟಿಡಿಆರ್ ಸೌಲಭ್ಯ ಬಳಸಿಕೊಳ್ಳಲು ಸಲಹೆ ನೀಡಿದರು.
ಇನ್ನು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಬೀದಿನಾಯಿಗಳ ಹಾವಳಿಯ ಬಗ್ಗೆ ಆಡಳಿತ ಮಂಡಳಿಗಳನ್ನು ಶಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತಿಂಗಳಿಗೆ ಸುಮಾರು 1,000 ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿದ್ದರೂ ಸ್ಥಳೀಯಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ ಅವರು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ತಕ್ಷಣ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವಂತೆ ನಿರ್ದೇಶಿಸಿದರು. ಶಾಲಾ ಮಕ್ಕಳಿಗೆ ರೇಬಿಸ್ ಜಾಗೃತಿ ಮೂಡಿಸಲಾಗುತ್ತಿದೆ ಎಂಬ ಅಧಿಕಾರಿಗಳ ಸಮಜಾಯಿಷಿಗೆ ವ್ಯಂಗ್ಯವಾಡಿದ ಶಾಸಕರು, ಬರಿ ಜಾಗೃತಿ ಮೂಡಿಸುವ ಬದಲು ನಾಯಿಗಳಿಂದ ತಪ್ಪಿಸಿಕೊಂಡು ಓಡಲು ಮಕ್ಕಳಿಗೆ ಹೈಜಂಪ್, ಲಾಂಗ್ಜಂಪ್ ಮತ್ತು ರನ್ನಿಂಗ್ ತರಬೇತಿ ನೀಡುವುದು ಒಳಿತು ಎಂದು ಸಭೆಯ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಹಲವು ಪ್ರಮುಖ ಆರೋಗ್ಯ ಮತ್ತು ಸಮಾಜ ಕಲ್ಯಾಣ ವಿಷಯಗಳು ಚರ್ಚೆಗೆ ಬಂದವು. ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಮೊಟ್ಟೆಗೆ ಸರ್ಕಾರದಿಂದ ನಿಗದಿಯಾಗಿರುವ 6 ರೂಪಾಯಿ ಹೊರತುಪಡಿಸಿ, ಬಾಕಿ ಮೊತ್ತವನ್ನು ಸ್ಥಳೀಯ ದಾನಿಗಳು, ಗ್ರಾಪಂ ಹಾಗೂ ಕಾರ್ಯಕರ್ತೆಯರೇ ಭರಿಸುತ್ತಿರುವ ವಿಚಾರ ಬೆಳಕಿಗೆ ಬಂದಿತು. ತಾಲೂಕಿನಲ್ಲಿ ವರದಿಯಾದ 565 ಶಂಕಿತ ಡೆಂಗ್ಯೂ ಪ್ರಕರಣಗಳ ಪೈಕಿ 19 ದೃಢಪಟ್ಟಿದ್ದು, 95 ಮಲೇರಿಯಾ ಪ್ರಕರಣಗಳಲ್ಲಿ 70 ಪ್ರಕರಣಗಳು ಹೊರರಾಜ್ಯದ ಕಾರ್ಮಿಕರಲ್ಲಿ ಕಂಡುಬಂದಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿತು. ಜೋಕಟ್ಟೆ ಮತ್ತು ಅಡ್ಯಾರ್ ಕಟ್ಟೆಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಾಣ, ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ನಿಷೇಧ ಕಟ್ಟುನಿಟ್ಟು ಜಾರಿ ಹಾಗೂ ಶೇ.75ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳು ಸಭೆಗೆ ವಿವರಣೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









