ಕಡಬ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣದಲ್ಲಿ ಕಡಬ ಮೂಲದ ಕುಖ್ಯಾತ ರೌಡಿಶೀಟರ್ಗೆ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪುತ್ತೂರು) 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಸದ್ದಾಂ (34) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಬಾಲಕಿಯ ಮನೆಗೆ ಅಕ್ರಮವಾಗಿ ಅತಿಕ್ರಮಣ ಪ್ರವೇಶ ಮಾಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಈತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಐಪಿಸಿಯ ವಿವಿಧ ಗಂಭೀರ ನಿಯಮಾವಳಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಕುರಿತು ಅಂದಿನ ಉಪ್ಪಿನಂಗಡಿ ವೃತ್ತ ನಿರೀಕ್ಷಕರಾಗಿದ್ದ ನಾಗೇಶ್ ಕೆ. ಅವರು ಕೂಲಂಕಷ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಸುಮಂಗಲಾ ಚಕಲಬ್ಬಿ ಅವರು ಆರೋಪಿ ಸದ್ದಾಂ ತಪ್ಪಿತಸ್ಥ ಎಂದು ಆದೇಶಿಸಿದರು. ಪೋಕ್ಸೋ ಕಾಯ್ದೆಯಡಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇದರೊಂದಿಗೆ, ಜೀವ ಬೆದರಿಕೆ ಒಡ್ಡಿದ ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ ಆರೋಪಿಗೆ ಪ್ರತ್ಯೇಕವಾಗಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹25,000 ದಂಡ ವಿಧಿಸಲಾಗಿದ್ದು, ದಂಡ ತಪ್ಪಿದರೆ ಮತ್ತೊಂದು ವರ್ಷ ಶಿಕ್ಷೆ ಹೆಚ್ಚಾಗಲಿದೆ. ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಶಿಕ್ಷೆಗೆ ಒಳಗಾದ ಸದ್ದಾಂ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ 2011, 2020 ಮತ್ತು 2021ರಲ್ಲಿ ಕಡಬ ಹಾಗೂ 2022ರಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿ ಸಾಲು ಸಾಲು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಸರ್ಕಾರ ಹಾಗೂ ಸಂತ್ರಸ್ತೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಅದಂತಾಯ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









