ಮಂಗಳೂರು : ಮಂಗಳೂರು ನಗರದಾದ್ಯಂತ ಸಂಚರಿಸುವ ಮೀನು ಸಾಗಾಟ ವಾಹನಗಳು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯುದ್ದಕ್ಕೂ ದುರ್ನಾತ ಬೀರುವ ತ್ಯಾಜ್ಯ ನೀರನ್ನು ಸುರಿಯುತ್ತಿರುವ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ವ್ಯಕ್ತವಾಗಿದ್ದು, ಈ ಸಂಬಂಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಮಂಗಳೂರು ಧಕ್ಕೆ ಮತ್ತು ಬಂದರು ಪ್ರದೇಶದಿಂದ ನಗರದ ಪ್ರಮುಖ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ಮೀನು ಲಾರಿಗಳು ಹರಿಯ ಬಿಡುವ ದುರ್ಗಂಧಪೂರಿತ ಕೊಳಚೆ ನೀರು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಅಪಾಯವನ್ನೂ ಒಡ್ಡುತ್ತಿದೆ.
ಸಾರ್ವಜನಿಕರ ದೂರುಗಳ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸ್ಪಷ್ಟ ಕಾನೂನು ಮತ್ತು ನಿಯಮಾವಳಿಗಳಿದ್ದರೂ ಕೆಲವು ವಾಹನ ಮಾಲೀಕರು ಹಾಗೂ ಚಾಲಕರು ಉಲ್ಲಂಘನೆಯನ್ನೇ ತಮ್ಮ ಹಕ್ಕು ಎನ್ನುವಂತೆ ಪ್ರದರ್ಶಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ. ಮೀನು ತ್ಯಾಜ್ಯ ನೀರು ಚೆಲ್ಲುವ ವಾಹನಗಳು ಸೇರಿದಂತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವಾಹನಗಳ ವಿರುದ್ಧವೂ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಸ್ತೆಗೆ ತ್ಯಾಜ್ಯ ನೀರು ಚೆಲ್ಲುವ ಮೀನು ಸಾಗಾಟ ವಾಹನಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, 2026ರಲ್ಲಿ ಈವರೆಗೆ ಒಟ್ಟು 604 ಪ್ರಕರಣಗಳನ್ನು ದಾಖಲಿಸಿ 3,02,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ದಂಡದ ಪ್ರಮಾಣ ಶೇಕಡಾ 30ರಷ್ಟು ಹೆಚ್ಚಳವಾಗಿದೆ. ಮೀನು ಲಾರಿಗಳಿಂದ ಕೊಳಚೆ ನೀರು ಸೋರಿಕೆಯಾಗದಂತೆ ತಡೆಯಲು ಮುಖ್ಯ ರಸ್ತೆಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ನಿರ್ಬಂಧಿತ ಪ್ಲೆಕ್ಸ್ ಬೋರ್ಡ್ಗಳನ್ನು ಸಹ ಅಳವಡಿಸಲಾಗಿದೆ. ಇನ್ನು ಮುಂದೆಯೂ ನಿಯಮ ಮೀರಿ ಸಂಚರಿಸುವ ವಾಹನಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









