ಮಂಗಳೂರು: ದೇಶದ ಮತದಾರರ ಪಟ್ಟಿಯ ಸಮಗ್ರ ಶುದ್ಧೀಕರಣ ಉದ್ದೇಶಿತ ಎಸ್.ಐ.ಆರ್ (SIR) ಪ್ರಕ್ರಿಯೆಯ ಕುರಿತು ಅಪಪ್ರಚಾರ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಡವಳಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಬಲವರ್ಧನೆಗಾಗಿ ನವೆಂಬರ್ 6ರಂದು ಮಂಗಳೂರು ನಗರದಲ್ಲಿ “ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ, ಸಂವಿಧಾನ ರಕ್ಷಿಸಿ” ಎಂಬ ಹೆಸರಿನಲ್ಲಿ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಮುಖ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನ ಸೌಧದಿಂದ ಪಾರಂಭಗೊಂಡು ಕದ್ರಿ ಮೈದಾನದವರೆಗೆ ಸಾಗಲಿದ್ದು, ಬಳಿಕ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.
ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಹುನ್ನಾರಗಳನ್ನು ಮಟ್ಟಹಾಕಲು ಮತ್ತು ಜನಸಾಮಾನ್ಯರ ಹಕ್ಕುಗಳ ರಕ್ಷಣೆಗೆ ಯುವಜನರ ಹಾಗೂ ನಾಗರಿಕರ ಬೆಂಬಲ ಅತ್ಯಗತ್ಯವಾಗಿದೆ. ಆದ್ದರಿಂದ ಸಮಸ್ತ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಅಭೂತಪೂರ್ವ ರೀತಿಯಲ್ಲಿ ಯಶಸ್ವಿಗೊಳಿಸಬೇಕಾಗಿ ಕ್ಯಾ. ಚೌಟ ವಿನಂತಿಸಿಕೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









