ಉಡುಪಿ: ಹಲವು ದಶಕಗಳಿಂದ ಸಕ್ರಿಯನಾಗಿದ್ದು ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಕಂಠಕವಾಗಿದ್ದ ಕುಖ್ಯಾತ ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ವಿದೇಶದಲ್ಲಿ ಬಂಧಿಸಲಾಗಿದೆ. ಭಾರತೀಯ ಗೂಢಚರ ಸಂಸ್ಥೆ ‘ರಾ’ (RAW) ಸಹಕಾರದೊಂದಿಗೆ ಇಂಟರ್ಪೋಲ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದು, ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ಭರದಿಂದ ಸಾಗಿವೆ. ಮೂಲಗಳ ಪ್ರಕಾರ ಆತನನ್ನು ಮಲೇಷ್ಯಾ ಅಥವಾ ಮ್ಯಾನ್ಮಾರ್ನಲ್ಲಿ ಬಂಧಿಸಲಾಗಿದ್ದು, ಈ ವಿಚಾರದಲ್ಲಿ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ. ಈ ಕಾರ್ಯಾಚರಣೆಗೆ ಮಹಾರಾಷ್ಟ್ರ ಪೊಲೀಸರ ತಾಂತ್ರಿಕ ಸಹಕಾರವೂ ದೊರೆತಿದೆ. ಉಡುಪಿಯ ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿ’ಸೋಜಾ ಹತ್ಯೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಕೊಲೆ, ಹಫ್ತಾ ವಸೂಲಿ, ಹಲ್ಲೆ ಹಾಗೂ ಜೀವ ಬೆದರಿಕೆಯ 25ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.
ಮೂಲತಃ ಉಡುಪಿ ಜಿಲ್ಲೆಯ ಎರ್ಮಾಳ್ನ ಕುಟುಂಬಕ್ಕೆ ಸೇರಿದ ಹೇಮಂತ್ ಪೂಜಾರಿ ಜನಿಸಿದ್ದು ಮಹಾರಾಷ್ಟ್ರದಲ್ಲಿ. ತನ್ನ ಹುಟ್ಟೂರಿನ ನಂಟಿನಿಂದಾಗಿ ಹಿಂದೊಮ್ಮೆ ಎರ್ಮಾಳಿಗೆ ಭೇಟಿ ನೀಡುತ್ತಿದ್ದ ಈತ, ಮುಂಬಯಿಯಲ್ಲಿ ಚೋಟಾ ರಾಜನ್ ಗ್ಯಾಂಗ್ ಮೂಲಕ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ. 1999ರಲ್ಲಿ ಬಿಲ್ಡರ್ ಶೌಕತ್ ಸರ್ಕಾರ್ ಕೊಲೆಯೊಂದಿಗೆ ಶೂಟರ್ ಆಗಿ ಗುರುತಿಸಿಕೊಂಡು, ನಂತರ 2002ರಲ್ಲಿ ಚೋಟಾ ರಾಜನ್ನಿಂದ ಬೇರ್ಪಟ್ಟು ಸ್ವಂತ ಅಪರಾಧ ಜಾಲ ಬೆಳೆಸಿದನು. ಮುಂಬಯಿಯ ಪ್ರಸಿದ್ಧ ಉದ್ಯಮಿಗಳಾದ ರತ್ನಾಕರ ಶೆಟ್ಟಿ, ಮೊಹಮ್ಮದ್ ಶಫಿ, ಜಯ ಶೆಟ್ಟಿ, ಬಾಂಬ್ ಬ್ಲಾಸ್ಟ್ ಆರೋಪಿ ಅಕೌರ್ ಖಾನ್ ಹಾಗೂ ಸುನಿಲ್ ಸೋಹನ್ಸ್ ಹತ್ಯೆ ಪ್ರಕರಣಗಳಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು.
ಕಳೆದ ಒಂದು ದಶಕದಿಂದ ಈತನ ಯಾವುದೇ ಸುಳಿವು ಸಿಗದ ಕಾರಣ ಪೊಲೀಸರು ಈತ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದರು. ಆದರೆ ಇತ್ತೀಚೆಗೆ ಮುದರಂಗಡಿಯಲ್ಲಿ ನಡೆದ ಡೇವಿಡ್ ಡಿ’ಸೋಜಾ ಹತ್ಯೆಯ ತನಿಖೆ ವೇಳೆ ಬಂಧಿತ ಆರೋಪಿಗಳು ನೀಡಿ ಮಾಹಿತಿ ಆಧರಿಸಿ ಈತ ಜೀವಂತವಾಗಿರುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಕರಾವಳಿಯ ಉದ್ಯಮಿಗಳು ಹಾಗೂ ಗುತ್ತಿಗೆದಾರರಿಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಗೃಹ ಸಚಿವರ ಸೂಚನೆಯಂತೆ ಕಾಪು, ಮಣಿಪಾಲ, ಶಿರ್ವ ಹಾಗೂ ಪಡುಬಿದ್ರಿ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದವು. ಈ ವೇಳೆ ಈತನಿಗೆ ಸಿಮ್ ಹಾಗೂ ಮೊಬೈಲ್ ಒದಗಿಸುತ್ತಿದ್ದ ಸುರೇಶ್ ಅಮೀನ್ ಮತ್ತು ಹರೀಶ್ ಪೂಜಾರಿಯನ್ನು ಬಂಧಿಸಿದ ಪೊಲೀಸರು, ಆರೋಪಿಯ ವಿದೇಶಿ ನೆಟ್ವರ್ಕ್ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಮುಂಬಯಿ ಪೊಲೀಸರ ನೆರವಿನಿಂದ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ, ಕೊನೆಗೂ ಈತನನ್ನು ವಿದೇಶದಲ್ಲಿ ಸೆರೆಹಿಡಿಯಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









