ಉಡುಪಿ : ಅಂತರರಾಷ್ಟ್ರೀಯ ಮಟ್ಟದ ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಉಡುಪಿ ಜಿಲ್ಲೆಯ ಪ್ರಭಾವಿ ಉದ್ಯಮಿಗಳು ಹಾಗೂ ವ್ಯಾಪಾರಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಿ ಸುಲಿಗೆ ಕೃತ್ಯಕ್ಕೆ ಸಹಕರಿಸುತ್ತಿದ್ದ ಸಂತೂರು ನಿವಾಸಿ ಹರೀಶ್ ಪೂಜಾರಿ (45) ಎಂಬಾತನನ್ನು ಶಿರ್ವಾ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುದರಂಗಡಿಯ ಡೇವಿಡ್ ಡಿಸೋಜ ಅವರ ಹತ್ಯೆಯ ಬಳಿಕ, ಹೇಮಂತ್ ಪೂಜಾರಿಯು ಕಾಪು, ಪಡುಬಿದ್ರಿ, ಮಣಿಪಾಲ ಮತ್ತು ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ವಿದೇಶಿ ಸಂಖ್ಯೆಗಳಿಂದ ಕರೆ ಮಾಡಿ ಕೋಟಿಗಟ್ಟಲೆ ಹಣ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದಲ್ಲಿ ಡೇವಿಡ್ ಡಿಸೋಜ ಅವರಿಗೆ ಬಂದ ಗತಿಯೇ ನಿಮಗೂ ಬರಲಿದೆ ಎಂದು ಜೀವ ಬೆದರಿಕೆ ಒಡ್ಡುತ್ತಿದ್ದನು. ಈ ಸುಲಿಗೆ ಯತ್ನ ಹಾಗೂ ಬೆದರಿಕೆ ಕರೆಗಳ ಕುರಿತು ಒಟ್ಟು ಎಂಟು ಪ್ರಕರಣಗಳು ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು.
ಶಿರ್ವಾ ಠಾಣೆ ಪೊಲೀಸರು ಚುರುಕಿನ ತನಿಖೆ ನಡೆಸಿದಾಗ ಹರೀಶ್ ಪೂಜಾರಿಯ ಅಕ್ರಮ ಪಾತ್ರ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಈತ ದೂರುದಾರರು ಸೇರಿದಂತೆ ಉಡುಪಿ ಜಿಲ್ಲೆಯ ಹಲವು ಪ್ರಮುಖ ಉದ್ಯಮಿಗಳ ಸಂಪರ್ಕ ಸಂಖ್ಯೆಗಳನ್ನು ಭೂಗತ ಪಾತಕಿಗೆ ತಲುಪಿಸಿ ಸುಲಿಗೆಗೆ ವ್ಯವಸ್ಥಿತವಾಗಿ ದಾರಿ ಮಾಡಿಕೊಡುತ್ತಿದ್ದನು. ವಿಚಾರಣೆಯ ಸಮಯದಲ್ಲಿ ಆರೋಪಿಯು ದೂರುದಾರರ ನಂಬರ್ ಸೇರಿದಂತೆ ಪ್ರಮುಖರ ವಿವರಗಳನ್ನು ಹೇಮಂತ್ ಪೂಜಾರಿಗೆ ಹಂಚಿಕೊಂಡಿರುವುದಾಗಿ ತಾನೇ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 2ರಂದು ಆರೋಪಿ ಹರೀಶ್ ಪೂಜಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತ ಅಪರಾಧ ಕೃತ್ಯಕ್ಕಾಗಿ ಬಳಸಿದ್ದ ಎರಡು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









