ಉಡುಪಿ: ಕುಖ್ಯಾತ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉಡುಪಿ ಜಿಲ್ಲೆಯ ಪ್ರಭಾವಿ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಹಣಕ್ಕಾಗಿ ಪೀಡಿಸುತ್ತಿದ್ದ ಹಾಗೂ ಕೊಲೆ ಬೆದರಿಕೆ ಒಡ್ಡುತ್ತಿದ್ದ ಜಾಲದ ಪ್ರಮುಖ ಆರೋಪಿಯನ್ನು ಉಡುಪಿ ಜಿಲ್ಲಾ ಪೊಲೀಸರು ಸೆರೆಹಿಡಿದಿದ್ದಾರೆ. ಎರ್ಮಾಳು ಬಡಾ ಗ್ರಾಮದ ಬಟ್ರತೋಟ ನಿವಾಸಿ ಸುರೇಶ್ ಅಮೀನ್ (38) ಬಂಧಿತ ವ್ಯಕ್ತಿ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಪಾತಕಿ ಹೇಮಂತ್ ಪೂಜಾರಿ ಕರಾವಳಿಯ ಶ್ರೀಮಂತರು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ವಸೂಲಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದನು. ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಐದು, ಕಾಪು, ಶಿರ್ವ ಹಾಗೂ ಮಣಿಪಾಲ ಠಾಣೆಗಳಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು ಎಂಟು ಗಂಭೀರ ಪ್ರಕರಣಗಳು ದಾಖಲಾಗಿದ್ದು, ವ್ಯಾಪಕ ತನಿಖೆ ಕೈಗೊಳ್ಳಲಾಗಿತ್ತು.
ಬಂಧಿತ ಆರೋಪಿ ಸುರೇಶ್ ಅಮೀನ್ ಭೂಗತ ಪಾತಕ್ತಿಗೆ ಸ್ಥಳೀಯ ಉದ್ಯಮಿಗಳ ವೈಯಕ್ತಿಕ ಮೊಬೈಲ್ ಸಂಖ್ಯೆಗಳು ಹಾಗೂ ಅಗತ್ಯ ಮಾಹಿತಿಯನ್ನು ಪೂರೈಸುವ ಮೂಲಕ ಕೃತ್ಯಕ್ಕೆ ನೇರವಾಗಿ ಸಾಥ್ ನೀಡಿದ್ದನು. ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗಗೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ಬೆದರಿಕೆಗೆ ಬಗ್ಗದೆ ಹಣ ನೀಡಲು ನಿರಾಕರಿಸಿದ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿರುವುದು ತಾಂತ್ರಿಕ ತನಿಖೆಯಿಂದ ಸಾಬೀತಾಗಿದೆ. ಈ ದುಷ್ಕೃತ್ಯಕ್ಕಾಗಿ ಪಾತಕಿ ಹೇಮಂತ್ ಪೂಜಾರಿ ₹5 ಲಕ್ಷ ಹಣವನ್ನು ಸುರೇಶ್ ಅಮೀನ್ ಖಾತೆಗೆ ವರ್ಗಾಯಿಸಿದ್ದು, ಆತನ ಬಳಿಯಿದ್ದ ರೂ. 4,13,000 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕೃತ್ಯದಲ್ಲಿ ಇನ್ನುಳಿದವರ ಕೈವಾಡವಿರುವ ಶಂಕೆ ಇರುವುದರಿಂದ, ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟತ್ತ್ಗೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









