ಮಂಗಳೂರು : ಕರ್ನಾಟಕ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಜಲಸಾರಿಗೆ ಮಂಡಳಿಯು ರಾಜ್ಯದ ಕಡಲ ವಲಯವನ್ನು ಬಲಪಡಿಸಲು ಮುಂದಾಗಿದೆ. ಇದರ ಭಾಗವಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇತ್ತೀಚೆಗೆ ಮಹತ್ವದ 7ನೇ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯು ಯಶಸ್ವಿಯಾಗಿ ಜರುಗಿದೆ.
ಸಭೆಯಲ್ಲಿ ಕಡಲ ಯೋಜನೆಗಳ ಅನುಷ್ಠಾನವನ್ನು ಕ್ಷಿಪ್ರಗೊಳಿಸುವುದು ಮತ್ತು ಹೊಸ ಹೂಡಿಕೆ ಅವಕಾಶಗಳನ್ನು ಸೃಷ್ಟಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ, ಸಚಿವ ಸಂಪುಟದ ಅಧಿಕೃತ ಅನುಮೋದನೆ ಪಡೆದಿರುವ ಒಟ್ಟು 8,295 ಕೋಟಿ ರೂಪಾಯಿಗಳಿಗೂ ಅಧಿಕ ಅಂದಾಜು ಮೊತ್ತದ ಎಂಟು ಪ್ರಮುಖ ಕಡಲ ಪಿಪಿಪಿ ಯೋಜನೆಗಳ ಹೂಡಿಕೆದಾರರ ಕೈಪಿಡಿ ಹಾಗೂ ಮಾರುಕಟ್ಟೆ ಸಾಮಗ್ರಿಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ದಕ್ಷ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರವು, ಕಡಲ ಕ್ಷೇತ್ರದ ಅಪಾರ ಸಾಮರ್ಥ್ಯವನ್ನು ಬಲವಾದ ಆರ್ಥಿಕ ಅವಕಾಶಗಳಾಗಿ ಪರಿವರ್ತಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯು ಶೀಘ್ರದಲ್ಲೇ ಈ ಯೋಜನೆಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲಿದೆ.
ಹೊಸದಾಗಿ ಬಿಡುಗಡೆಯಾಗಿರುವ ಹೂಡಿಕೆದಾರರ ಕೈಪಿಡಿಯು ರಾಜ್ಯದ ಕಡಲ ವಲಯದ ಸಮಗ್ರ ಚಿತ್ರಣವನ್ನು ಜಾಗತಿಕ ಹಾಗೂ ದೇಶೀಯ ಹೂಡಿಕೆದಾರರಿಗೆ ಒದಗಿಸಲಿದೆ. ಈ ಬೃಹತ್ ಉಪಕ್ರಮಗಳು ಕಡಲ ಪರಿಸರ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬುವುದರೊಂದಿಗೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಹಾಗೂ ಕರಾವಳಿ ಭಾಗದ ಸರ್ವಾಂಗೀಣ ಆರ್ಥಿಕ ಬೆಳವಣಿಗೆಗೆ ವಿಶೇಷ ಒತ್ತು ನೀಡಲಿವೆ.
ದೃಢವಾದ ಯೋಜನಾ ಸರಣಿ ಮತ್ತು ಸರ್ಕಾರದ ಸಕರಾತ್ಮಕ ನೀತಿ ಬೆಂಬಲದೊಂದಿಗೆ, ಭಾರತದ ನೀಲಿ ಆರ್ಥಿಕತೆ (ಬ್ಲೂ ಎಕಾನಮಿ) ಅಭಿವೃದ್ಧಿಯಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಲು ಮತ್ತು ಪ್ರಮುಖ ಹೂಡಿಕೆ ತಾಣವಾಗಿ ರೂಪುಗೊಳ್ಳಲು ವೇದಿಕೆ ಸಿದ್ಧವಾಗಿದೆ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









