ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ವಿಶೇಷ ಸಂದರ್ಭದಲ್ಲಿ, ರಾಮೇಶ್ವರಂನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಬಳಸಿದ್ದ ಟಾಟಾ ನ್ಯಾನೋ ಕಾರು ಹಾಗೂ ಅದರ ಅಧಿಕೃತ ದಾಖಲೆಗಳನ್ನು ಧರ್ಮಸ್ಥಳದ ಮಂಜೂಷಾ ವಾಹನ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲು ಹೆಗ್ಗಡೆಯವರಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಕ್ಷಣಗಳನ್ನು ನೆನಪಿಸಿಕೊಂಡ ಹೆಗ್ಗಡೆಯವರು, ಕಲಾಂ ಅವರ ಸರಳ ಜೀವನ, ಸರ್ವಧರ್ಮ ಸಮನ್ವಯ ದೃಷ್ಟಿಕೋನ ಹಾಗೂ ದೈವಭಕ್ತಿ ಮತ್ತು ವಿಶ್ವಾಸವನ್ನು ಸ್ಮರಿಸಿದರು.
ಮಕ್ಕಳೊಂದಿಗೆ ಮಗುವಾಗಿ ಮುಕ್ತವಾಗಿ ಬೆರೆಯುತ್ತಿದ್ದ ಅವರ ಸರಳ ವ್ಯಕ್ತಿತ್ವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದ ಹೆಗ್ಗಡೆಯವರು, ಅವರ ಸವಿನೆನಪಿಗಾಗಿ ತಮಗೆ ನೀಡಲಾದ ಟಾಟಾ ನ್ಯಾನೋ ಕಾರು ಮತ್ತು ಅಪರೂಪದ ಪೆನ್ನಿಗಾಗಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಎ.ಪಿ.ಜೆ.ಎಂ. ನಝೀಮಾ ಮರೈಕಾಯರ್, ಕಾರ್ಯದರ್ಶಿ ಎ.ಪಿ.ಜೆ.ಎಂ. ಜೈನುಲಾಬ್ದೀನ್ ಹಾಗೂ ಸಹಸಂಸ್ಥಾಪಕ ಎ.ಪಿ.ಜೆ.ಎಂ. ಶೇಖ್ ಸಲೀಂ ಅವರು ಉಪಸ್ಥಿತರಿದ್ದು, ಪ್ರತಿಷ್ಠಾನದ ಪರವಾಗಿ ದಾಖಲೆಗಳ ಸಮೇತ ಟಾಟಾ ನ್ಯಾನೋ ಕಾರು ಮತ್ತು ಪೆನ್ನನ್ನು ಪೂಜ್ಯ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು.
ಕೊಡುಗೆ ನೀಡಿದ ಪ್ರತಿಷ್ಠಾನಕ್ಕೆ ಧನ್ಯವಾದ ಅರ್ಪಿಸಿದ ಹೆಗ್ಗಡೆಯವರು, ದಾನಿಗಳನ್ನು ಗೌರವಿಸಿ ಸನ್ಮಾನಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಬುಧವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ, ಆದರೆ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಇಡೀ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ದೇವಸ್ಥಾನ, ಬೀಡು, ವಸತಿಛತ್ರಗಳು ಸೇರಿದಂತೆ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿದ್ಯುದ್ದೀಪಗಳು ಹಾಗೂ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.
ಜನ್ಮದಿನದ ಪ್ರಯುಕ್ತ ಕ್ಷೇತ್ರದ ದೇವಸ್ಥಾನ ಮತ್ತು ಬಸದಿಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ದೇವಸ್ಥಾನದ ಸಿಬ್ಬಂದಿ, ಸ್ಥಳೀಯ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಪೂಜ್ಯ ಹೆಗ್ಗಡೆಯವರಿಗೆ ಫಲ-ಪುಷ್ಪಗಳ ಹಾರ ಅರ್ಪಿಸಿ ಗೌರವ ಸಲ್ಲಿಸಿದರು. ಪೆರಿಂಜೆ ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಡಾ. ಪ್ರಭಾಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ, ಸುದರ್ಶನ ಜೈನ್ ಬಂಟ್ವಾಳ, ಮೂಡುಬಿದಿರೆ ನೋಟರಿ ಶ್ವೇತಾ ಜೈನ್, ಪ್ರಭಾತ್ ಸಿಲ್ಕ್ ಮಾಲೀಕ ಪ್ರಭಾತ್ ಮೂಡುಬಿದಿರೆ, ಮಾಳ ಹರ್ಷೇಂದ್ರ ಜೈನ್, ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ನಾರಾವಿ, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತಾಧಿಕಾರಿ ಬಿ.ಪಿ. ಸಂಪತ್ ಕುಮಾರ್ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಸೇರಿದಂತೆ ಹಲವು ಗಣ್ಯರು ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಕೋರಿದರು.
ಪೂಜ್ಯ ಹೆಗ್ಗಡೆಯವರ 79ನೇ ಜನ್ಮದಿನದ ಸ್ಮರಣಾರ್ಥ ‘ವಂದೇ ಭಾರತಂ’ ಪರಿಕಲ್ಪನೆಯಡಿ, ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ನೇತೃತ್ವ ಹಾಗೂ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದೊಂದಿಗೆ ವೀರವನಿತೆಯರ ಸಂಕ್ಷಿಪ್ತ ಪರಿಚಯವಿರುವ ಸಚಿತ್ರ ಅಂಚೆ ಚೀಟಿಗಳನ್ನು ಬೀಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ, ರಣಭೈರವಿ ಅಕ್ಕಾದೇವಿ, ಕಾಳಲಾದೇವಿ, ಕಂತಿ, ಚೌಟರ ರಾಣಿ ಅಬ್ಬಕ್ಕ ದೇವಿ, ನಾಟ್ಯರಾಣಿ ಶಾಂತಲಾದೇವಿ ಮತ್ತು ಚಂದನಬಾಲೆ ಅವರ ಸಚಿತ್ರ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಲಾಯಿತು.
ಇದರೊಂದಿಗೆ ವಂದೇ ಮಾತರಂ ಗೀತೆಯ 150 ವರ್ಷಗಳ ಸ್ಮರಣಾರ್ಥ ಹಾಗೂ 2026ರಲ್ಲಿ ಜಿನಸಮ್ಮಿಲನ ನಡೆಯಲಿರುವ ಸಮ್ಮೇದಶಿಖರ್ಜಿಯ ವಿಷಯಗಳನ್ನೊಳಗೊಂಡ ಅಂಚೆಪತ್ರಗಳೂ ಸೇರಿದಂತೆ ಒಟ್ಟು ಹತ್ತು ಅಂಚೆಪತ್ರಗಳನ್ನು ಲೋಕಾರ್ಪಣೆ ಮಾಡಲಾಯಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಂಚೆ ಚೀಟಿಗಳನ್ನು ಅನಾವರಣಗೊಳಿಸಿ ಅಂಚೆ ಇಲಾಖೆ ಮತ್ತು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಅಂಚೆ ಇಲಾಖೆಯ ನಿರ್ದೇಶಕ ಶ್ರೀಹರ್ಷ ಎನ್. ಹಾಗೂ ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ನಾಯ್ಕ ಉಪಸ್ಥಿತರಿದ್ದರು.
ಹುಬ್ಬಳ್ಳಿಯ ಮಹಾವೀರ ಕುಂದೂರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ನಾರಾವಿ, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಆಡಳಿತ ನಿರ್ದೇಶಕ ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.
ಇದೇ ವೇಳೆ, ಬೆಂಗಳೂರಿನ ಅಂಚೆಪಾಳ್ಯದ ಶ್ರೀ ಮಂಜುನಾಥ ಸ್ವಾಮಿ ಬಿಲ್ಡರ್ಸ್ ಮಾಲೀಕ ಹಾಗೂ ಧರ್ಮಸ್ಥಳದ ಭಕ್ತರಾದ ಹಿರಿಯ ಉದ್ಯಮಿ ಬಸವರಾಜ್ ಆರ್. ಅವರು 10 ಆಸನಗಳ ಸಾಮರ್ಥ್ಯದ ವಿದ್ಯುತ್ ಚಾಲಿತ ‘ಬಗ್ಗಿ’ (ಇ.ವಿ.) ಕಾರನ್ನು ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದರು. ವಿಶೇಷಚೇತನ ಭಕ್ತರು ವಸತಿಗೃಹಗಳಿಗೆ ತೆರಳಲು ಈ ವಾಹನವನ್ನು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಅಂಗವಾಗಿ ಬುಧವಾರ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತ್ಯೇಕ ಶುಭಾಶಯ ಪತ್ರಗಳನ್ನು ಕಳುಹಿಸುವ ಮೂಲಕ ಹೆಗ್ಗಡೆಯವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









