ಉಪ್ಪಿನಂಗಡಿ: ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಎರಡು ಕಾಡಾನೆಗಳು ರವಿವಾರ ಮುಂಜಾನೆಯಿಂದ ವಿಹರಿಸುತ್ತಿದ್ದು, ನದಿಯ ಸುತ್ತಲೂ ಜನ ಸಮೂಹ ವೀಕ್ಷಣೆಗೆ ಬರುತ್ತಿದ್ದಾರೆ.
ಕಳೆದೆರಡು ದಿನಗಳಿಂದ ನೆಕ್ಕಿಲಾಡಿ ಬಿಳಿಯೂರು ಪರಿಸರದಲ್ಲಿ ಕಾಣಿಸುತ್ತಿದ್ದ ಆನೆಗಳು ಶನಿವಾರ ರಾತ್ರಿ ಸುರ್ಯದ ಸುಬ್ರಹ್ಮಣ್ಯ ಭಟ್ ಎಂಬವರ ತೋಟದಲ್ಲಿ ಇತ್ತು. ಬಳಿಕ ರಾತ್ರಿ ವೇಳೆ ಸರಳೀಕಟ್ಟೆ, ಪಿಲಿಗೂಡು, ಅಂಬೊಟ್ಟು ಮಾರ್ಗವಾಗಿ ಇಳಂತಿಲ ಗ್ರಾಮದ ಅಂಡೆತಡ್ಕ ಎಂಬಲ್ಲಿಂದ ನೇತ್ರಾವತಿ ನದಿಗಿಳಿದಿದೆ.
ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ರಸ್ತೆಯ ಬಳಿ ನೇತ್ರಾವತಿ ನದಿಯಲ್ಲಿ ಕಾಣಿಸಿದ್ದ ಕಾಡಾನೆಗಳು ಜನವಸತಿ ಪ್ರದೇಶದತ್ತ ಬಾರದಂತೆ ಅರಣ್ಯ ಇಲಾಖೆ , ಪೊಲೀಸ್ ಇಲಾಖೆ , ಹಾಗೂ ಹೋಂಗಾರ್ಡ್ ಸಿಬ್ಬಂದಿ ನಿಗಾವಿರಿಸಿ ಜಂಟಿ ಕಾರ್ಯಾಚರಣೆ ನಡೆಸಿದರು.
ಉಪ್ಪಿನಂಗಡಿಯಲ್ಲಿದ್ದ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಬೋಟನ್ನು ಬಳಸಿಕೊಂಡು ನದಿಗಿಳಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಕೋವಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಗಳು ಜನವಸತಿಯತ್ತ ಬಾರದಂತೆ ಬೆದರಿಸಲು ಯತ್ನಿಸಿದರು. ಜನವಸತಿ ಪ್ರದೇಶದತ್ತ ಆನೆಗಳ ಚಲನೆ ಕಂಡು ಬಂದಾಗಲೆಲ್ಲಾ ದಡದಲ್ಲಿ ಗರ್ನಲ್ ಸಿಡಿಸಿ ಆನೆಗಳನ್ನು ಬೆದರಿಸಲಾಯಿತು. ಒಟ್ಟಾರೆ ದಿನವಿಡೀ ನದಿಯಲ್ಲಿ ಬೋಟ್ ಮೂಲಕ ಗುಂಡು ಹಾರಿಸುತ್ತಾ, ದಡದಲ್ಲಿ ಸುಡುಮದ್ದು ಸಿಡಿಸುವ ಮೂಲಕ ಆನೆಗಳನ್ನು ಉಪ್ಪಿನಂಗಡಿ ಪೇಟೆಯತ್ತ ಸಂಚರಿಸದಂತೆ ನಿರಂತರ ಪ್ರಯತ್ನ ನಡೆಸಲಾಯಿತು. ಸಂಜೆಯವರೆಗೂ ಆನೆ ನದಿಯಲ್ಲೇ ಕೂಟೇಲು ಪರಿಸರದಿಂದ ಪಂಜಳ ತನಕ ಸಂಚರಿಸುವುದು ಹಿಂದಿರುಗುವುದು ಮಾಡುತ್ತಲೇ ಇದ್ದ ಕಾರಣ ಇಲಾಖಾಧಿಕಾರಿಗಳು ಆನೆ ಓಡಿಸುವ ಪ್ರಯತ್ನ ವನ್ನು ನಡೆಸುತ್ತಲ್ಲೇ ಇರಬೇಕಾಯಿತು. ಸಂಜೆಯ ವೇಳಗೆ ಆನೆಗಳು ಮತ್ತೆ ಪಂಜಳ ತಲುಪಿವೆ.
ರವಿವಾರದ ನದಿಯಲ್ಲಿ ಆನೆಗಳು ಇಳಂತಿಲ ಗ್ರಾಮದ ಕಡೆಗೆ ಸಾಗಿದರೆ ಆ ಕಡೆಯಿಂದ ಗರ್ನಾಲ್ ಶಬ್ಧ, ಉಪ್ಪಿನಂಗಡಿ ಗ್ರಾಮದತ್ತ ಮುಖ ಮಾಡಿದರೆ ಈ ಕಡೆಯಿಂದ ಗರ್ನಾಲ್ ಶಬ್ಧ ಕೇಳಿ ಬರುತ್ತಿತು.
ಸ್ಥಳದಲ್ಲಿ ಮಂಗಳೂರು ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ವಿಭೂತೆ, ಎಸಿಎಫ್ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ , ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪೆÇಲೀಸ್ ಅಧಿಕಾರಿಗಳು, ಸುಖಿತಾ ಶೆಟ್ಟಿ , ದಿನೇಶ್ ಬಿ. ನೇತೃತ್ವದ ಗೃಹರಕ್ಷಕ ದಳದ ತಂಡ ಘಟನಾ ಸ್ಥಳದಲ್ಲಿದ್ದು, ಆನೆಗಳ ಸಂಚಾರದ ಬಗ್ಗೆ ನಿಗಾವಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









