ಮಂಗಳೂರು : ಮಂಗಳೂರಿನಿಂದ ಸಂಚರಿಸುವ ಖಾಸಗಿ ಬಸ್ ಒಂದರಲ್ಲಿ ಕಾಲೇಜು ಯುವತಿಯರ ಎದುರು ಅತ್ಯಂತ ಅಸಭ್ಯವಾಗಿ ವರ್ತಿಸಿ, ಲೈಂಗಿಕವಾಗಿ ಹಿಂಸಿಸಲು ಯತ್ನಿಸಿದ ಬಸ್ ಕಂಡಕ್ಟರ್ನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಸದ್ಯ ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತ ಆರೋಪಿಯನ್ನು ಉಪ್ಪಿನಂಗಡಿಯ ಕಲ್ಲೇರಿ ಮೂಲದ ಇರ್ಫಾನ್ (32) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಕರ್ವೇಲು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಮಂಗಳೂರು ಮತ್ತು ವಿಟ್ಲ ನಡುವೆ ಚಲಿಸುವ ‘ಸೆಲೆನ’ ಹೆಸರಿನ ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ಕಳೆದ ಜುಲೈ 9ರಂದು ಸಂಜೆ 5 ಗಂಟೆಯ ಸುಮಾರಿಗೆ ಮಂಗಳೂರಿನಿಂದ ಹೊರಟಿದ್ದ ಬಸ್ಸಿನಲ್ಲಿ ಈ ಗಂಭೀರ ಘಟನೆ ನಡೆದಿದೆ. ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಈತ, ಅವರೆದುರೇ ತನ್ನ ಗುಪ್ತಾಂಗ ಪ್ರದರ್ಶಿಸಿ ಅಶ್ಲೀಲ ಸನ್ನೆಗಳನ್ನು ಮಾಡಿದ್ದಾನೆ. ಅಷ್ಟೇ ಅಲ್ಲದೆ, ಬಸ್ಸಿನ ಕಡೆಯ ಸೀಟಿಗೆ ಬರುವಂತೆ ಬಲವಂತಪಡಿಸಿ ಅವರಿಗೆ ತೀವ್ರ ಮುಜುಗರ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ.
ಆರೋಪಿಯ ಈ ವಿಕೃತ ನಡವಳಿಕೆಯಿಂದ ತೀವ್ರ ಆಘಾತಕ್ಕೊಳಗಾದ ವಿದ್ಯಾರ್ಥಿನಿಯರು ತಕ್ಷಣವೇ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜುಲೈ 10ರಂದು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಪ್ರಕ್ರಿಯೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










