ಕುಶಾಲನಗರ :ಗುರುವಾರ ಸಂಜೆ ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗು ಒಂದೇ ಕುಟುಂಬದ 6 ಮಂದಿ ಸದಸ್ಯರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟ ಘಟನೆ ಬೈಲುಕೊಪ್ಪದ ಸಮೀಪ ಬೆಂಗಳೂರು- ಬಂಟ್ವಾಳ ರಾಜ್ಯ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ.
ಸುಂಟಿಕೊಪ್ಪದ ಕಾರ್ಪೆಂಟರ್ ಶಫಿ (43), ಪತ್ನಿ ರಮೀಜಾ (36) ಪುತ್ರರಾದ ಇರ್ಫಾನ್ (19), ಇಮ್ರಾನ್ (16), ಪುತ್ರಿ ತಸ್ಮಿಯಾ (13), ಕಿರಿಯ ಪುತ್ರ ಮೂರು ವರ್ಷದ ಆಫಾನ್, ಶಫಿ ಅವರ ತಮ್ಮ ರಫೀಕ್ (26) ಮತ್ತು ಮೈಸೂರು ಜಿ.ಪಂ. ಮಾಜಿ ಸದಸ್ಯ ಕಾಳತಿಮ್ಮನಹಳ್ಳಿ ಚೌಡಯ್ಯ (50) ಮೃತಪಟ್ಟವರಾಗಿದ್ದಾರೆ.
ಶಫಿ ಅವರು ಸುಂಟಿಕೊಪ್ಪದಲ್ಲಿ ಪೀಠೊಪಕರಣ ತಯಾರಿ ಅಂಗಡಿ ಹೊಂದಿದ್ದು, ಅವರು ಮತ್ತು ಅವರ ತಮ್ಮ ರಫೀಕ್ ಜತೆಯಾಗಿ ಅದನ್ನು ನಿರ್ವಹಿಸುತ್ತಿದ್ದರು. ಶಫಿ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಸುಂಟಿಕೊಪ್ಪದಲ್ಲಿ ವಾಸಿಸುತ್ತಿದ್ದು, ರಫೀಕ್ ಪ್ರತಿನಿತ್ಯ ಬಸ್‌ನಲ್ಲಿ ಪಿರಿಯಾಪಟ್ಟಣದಲ್ಲಿರುವ ತಾಯಿ ಮನೆಗೆ ಹೋಗಿ ಬರುತ್ತಿದ್ದರು. ಆದರೆ ಗುರುವಾರ ಸಂಜೆ ತಾಯಿಯನ್ನು ನೋಡಲೆಂದು ಶಫಿ ತನ್ನ ಪತ್ನಿ ಮತ್ತು ಮಕ್ಕಳು ಹಾಗೂ ತಮ್ಮ ರಫೀಕ್ ರ ಜೊತೆಗೂಡಿ ತಮ್ಮ ಕಾರು ಮಾರುತಿ 800 ನಲ್ಲಿ ಒಟ್ಟಿಗೆ ಹೊರಟ್ಟಿದ್ದರು. ಇತ್ತ ಮೈಸೂರು ಜಿ.ಪಂ. ಮಾಜಿ ಸದಸ್ಯ ಚೌಡಯ್ಯ ಅವರು ಪಿರಿಯಾಪಟ್ಟಣದಿಂದ ಕೊಪ್ಪ ಕಡೆಗೆ ಕಾರನ್ನು ಸ್ವತಃ ಚಲಾಯಿಸಿಕೊಂಡು ಬರುತ್ತಿದ್ದು ಬೈಲುಕೊಪ್ಪ ಬಳಿ ಶಫಿ ರವರ ಕಾರಿಗೆ ಚೌಡಯ್ಯ ರವರ ಕಾರು ಡಿಕ್ಕಿ ಹೊಡೆಯಿತು ಪರಿಣಾಮ ಚೌಡಯ್ಯ ಹಾಗೂ ಮಾರುತಿ ಕಾರಿನಲ್ಲಿದ್ದ ಶಫಿ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಮಕ್ಕಳು ಮೈಸೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರು. ಅಪಘಾತಕ್ಕೀಡಾದ ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಮಂದಿ ಅಪಘಾತ ಸ್ಥಳದಲ್ಲಿ ಜಮಾಯಿಸಿದರು. ಇದರಿಂದ ಸುಮಾರು ಒಂದು ಕಿ.ಮೀ. ದೂರ ಟ್ರಾಫಿಕ್ ಜಾಂ ಸಂಭವಿಸಿತು. ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಶವಗಳನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯ ಶವಾಗಾರದ ಮೃತರ ಸಂಬಂಧಿಕರ ರೋಧನ ಮುಗಿಲುಮುಟ್ಟಿತ್ತು.
Click this button or press Ctrl+G to toggle between Kannada and English