ಮಂಗಳೂರು : ರಾಜ್ಯದಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿಗಳ ಮೇಲೆ ನಡೆಯತ್ತಿರುವ ದೌರ್ಜನ್ಯಗಳನ್ನು ತಡೆಯಲು ಉನ್ನತ ಶಿಕ್ಷಣ ಇಲಾಖೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು. ಡಿಸೆಂಬರ್ 29 ಶನಿವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ದಿಲ್ಲಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಘಟನೆ ದೇಶದ ಆತ್ಮಸಾಕ್ಷಿ ಪ್ರಶ್ನಿಸುವಂಥದ್ದು. ಅತ್ಯಾಚಾರಿಗಳಿಗೆ ಕಠಿಣ ವಿಧಿಸಬೇಕು ಮತ್ತು ಆರು ತಿಂಗಳೊಳಗೆ ಪ್ರಕರಣ ಇತ್ಯರ್ಥಕ್ಕೆ ಕಾನೂನು ತಿದ್ದುಪಡಿ ಅಗತ್ಯ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮಾರ್ಗದರ್ಶಿ ಸೂತ್ರ ರಚಿಸಲು ಡಿಸೆಂಬರ್ 31 ಅಥವಾ ಜನವರಿ 5ರಂದು ಎಲ್ಲ ವಿಶ್ವವಿದ್ಯಾನಿಲಯದ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಪ್ರತೀ ಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾರ್ಥಿನಿಯರ ಹಾಗೂ ಮಹಿಳಾ ಉದ್ಯೋಗಿಗಳ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು ಪ್ರತ್ಯೇಕ ಘಟಕವನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆಸಲಾಗುವುದು. ಈ ಘಟಕದಲ್ಲಿ ಹಿರಿಯ ಮಹಿಳಾ ಉಪನ್ಯಾಸಕಿಯ ನೇತೃತ್ವದಲ್ಲಿ ಪ್ರಾಂಶುಪಾಲರು, ವಿದ್ಯಾರ್ಥಿನಿ ಪ್ರತಿನಿಧಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಮಹಿಳಾ ಸದಸ್ಯರು ಉಪಸ್ಥಿತರಿರಲಿದ್ದು ದೂರಿನ ಬಗ್ಗೆ ಗೌಪ್ಯತೆ, ದೂರು ನೀಡಿದವರಿಗೆ ರಕ್ಷಣೆ ಹಾಗೂ ಗಂಭೀರ ಸ್ವರೂಪದ ಪ್ರಕರಣವಾದರೆ ಪೊಲೀಸರಿಗೆ ಮಾಹಿತಿ ನೀಡುವ ವ್ಯವಸ್ಥೆ ಹಾಗೂ ಈ ಘಟಕವು ವಾರಕ್ಕೊಮ್ಮೆ ದೂರು ಆಧರಿಸಿ ಆಪ್ತ ಸಮಾಲೋಚನೆ ನಡೆಸುವಂತೆ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು.
ಸೌಜನ್ಯ ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿದರೂ ತನಿಖೆ ಆರಂಭಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ರಾಜಕೀಯವನ್ನು ಬೆರೆಸದೆ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆಯಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಹಾಗೂ ಬಿಜೆಪಿ ಮುಖಂಡ ಶ್ರೀಕರ ಪ್ರಭು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English