ಮಂಗಳೂರು: ನಗರದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾದ ಸಂತ ಆಗ್ನೇಸ್ ಕಾಲೇಜಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆ ಹಾಗೂ ಮೇಕ್ ಆ ಚೇಂಜ್ ಫೌಂಡೇಶನ್ ಸಹಯೋಗದೊಂದಿಗೆ ‘ನಶೆ ಮುಕ್ತ ಮಂಗಳೂರು’ ಅಭಿಯಾನದ ಭಾಗವಾಗಿ ವಿಶೇಷ ಕಾರ್ನರ್ ಮೀಟ್ ಆಯೋಜಿಸಲಾಗಿತ್ತು. ಮಂಗಳೂರು ನಗರದ ಘನತೆಯನ್ನು ಮರುಸ್ಥಾಪಿಸುವ ಮತ್ತು ವಿದ್ಯಾರ್ಥಿ ಸಮುದಾಯವನ್ನು ಮಾದಕ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಋಣಾತ್ಮಕ ಬಿಂಬ ಬದಲಾಗಲಿ: ಕಾರ್ಯಕ್ರಮದಲ್ಲಿ ಮಾತನಾಡಿದ ಮೇಕ್ ಆ ಚೇಂಜ್ ಫೌಂಡೇಶನ್ ಸಂಸ್ಥಾಪಕ ಸುಹೈಲ್ ಕಂದಕ್ ಅವರು, ಮಂಗಳೂರು ನಗರವು ತನ್ನ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಗಳಿಂದ ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿದೆ. ಆದರೆ ಇತ್ತೀಚಿನ ಕೆಲವು ಅಹಿತಕರ ಘಟನೆಗಳಿಂದಾಗಿ ನಗರದ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು. ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಂಗಳೂರನ್ನು ಮತ್ತೆ ನೈತಿಕ ಮತ್ತು ಶೈಕ್ಷಣಿಕವಾಗಿ ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಕಾಳಜಿ ಮತ್ತು ಸಹಕಾರ: ಕದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಮನೋಹರ್ ಅವರು ವಿದ್ಯಾರ್ಥಿಗಳಿಗೆ ಅಭಯ ನೀಡುತ್ತಾ, “ನಮ್ಮ ಗುರಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸುವುದಲ್ಲ, ಬದಲಾಗಿ ಅವರನ್ನು ಮಾದಕ ವ್ಯಸನದ ಕೂಪದಿಂದ ರಕ್ಷಿಸುವುದಾಗಿದೆ” ಎಂದರು. ಮಾದಕ ವ್ಯಸನಕ್ಕೆ ತುತ್ತಾದವರ ಬಗ್ಗೆ ಮಾಹಿತಿ ನೀಡಿದರೆ ಪೊಲೀಸ್ ಇಲಾಖೆಯ ವತಿಯಿಂದ ಉಚಿತ ಕೌನ್ಸಿಲಿಂಗ್ ಮತ್ತು ಪುನರ್ವಸತಿಗೆ ನೆರವು ನೀಡಲಾಗುವುದು. ಡ್ರಗ್ಸ್ ಮುಕ್ತ ಮಂಗಳೂರು ನಿರ್ಮಾಣದಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ಪ್ರತಿಪಾದಿಸಿದರು.
ಅನುಭವದ ಪಾಠ ಮತ್ತು ಕಹಿ ಸತ್ಯ: ಬಾರ್ನ್ ಅಗೈನ್ ಫೌಂಡೇಶನ್ ಮುಖ್ಯಸ್ಥೆ ಬೀನಾ ಅವರು ತಮ್ಮ ವೈಯಕ್ತಿಕ ಜೀವನದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಾ, ಮಾದಕ ವ್ಯಸನವು ಕೇವಲ ವ್ಯಕ್ತಿಯನ್ನಷ್ಟೇ ಅಲ್ಲದೆ, ಆತನ ಕುಟುಂಬ ಮತ್ತು ಇಡೀ ಸಮಾಜವನ್ನು ಹೇಗೆ ಹದಗೆಡಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ತಾವು ಎದುರಿಸಿದ ಸಂಕಷ್ಟಗಳನ್ನು ವಿವರಿಸುತ್ತಾ, ಕ್ಷಣಿಕ ಸುಖಕ್ಕಾಗಿ ಜೀವನವನ್ನು ಹಾಳುಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜಾ, ಪ್ರಾಂಶುಪಾಲೆ ಡಾ. ಸಿಸ್ಟರ್ ಎಂ. ವೆನಿಸಾ ಎ.ಸಿ. ಹಾಗೂ ಲಾವಣ್ಯ ಬಲ್ಲಾಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









