ಮಂಗಳೂರು : ನಗರದ ಬಿಜೈನಲ್ಲಿರುವ ಪ್ರತಿಷ್ಠಿತ ಲೂರ್ಡ್ಸ್ ಶಾಲೆಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶಾಲೆಯ ಅಧಿಕೃತ ಇಮೇಲ್ ವಿಳಾಸಕ್ಕೆ ಈ ಬೆದರಿಕೆ ಸಂದೇಶ ಬಂದ ತಕ್ಷಣ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕದ್ರಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಶಾಲೆಯ ಪ್ರತಿಯೊಂದು ಮೂಲೆ ಮೂಲೆಯನ್ನೂ ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ನ್ಯಾಯಾಲಯ ಹಾಗೂ ಬೆಂಗಳೂರಿನ ಹಲವು ಶಾಲೆಗಳಿಗೂ ಇದೇ ಮಾದರಿಯ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿದ್ದವು. ಈ ಹಿಂದೆ ನ್ಯಾಯಾಲಯಕ್ಕೆ ಬಂದಿದ್ದ ಬೆದರಿಕೆಯನ್ನು ತಪಾಸಣೆ ನಡೆಸಿದ ಪೊಲೀಸರು ಅದು ‘ಹುಸಿ ಬೆದರಿಕೆ’ ಎಂದು ಸ್ಪಷ್ಟಪಡಿಸಿದ್ದರು. ತಮಿಳುನಾಡು ಮೂಲದಿಂದ ರಾಜ್ಯದ ವಿವಿಧೆಡೆ ಇಂತಹ ಸಂದೇಶಗಳು ರವಾನೆಯಾಗುತ್ತಿರುವ ಬಗ್ಗೆ ಈ ಹಿಂದೆ ಸುಳಿವು ಸಿಕ್ಕಿತ್ತು. ಪ್ರಸ್ತುತ ಲೂರ್ಡ್ಸ್ ಶಾಲೆಯಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ಅಥವಾ ಅಸಹಜ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸೈಬರ್ ಕ್ರೈಮ್ ವಿಭಾಗದ ನೆರವಿನೊಂದಿಗೆ ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









