ಮಂಗಳೂರು: ಪುತ್ತೂರಿನಲ್ಲಿ ಸಂಚಲನ ಮೂಡಿಸಿದ್ದ ಮಗು ಡೆಲಿವರಿ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾದ ಕೆ.ಪಿ. ನಂಜುಂಡಿ ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣದ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಡಿಎನ್ಎ ಪರೀಕ್ಷೆಯ ವರದಿಯಲ್ಲಿ ಆರೋಪಿ ಶ್ರೀಕೃಷ್ಣನೇ ಮಗುವಿನ ತಂದೆ ಎಂಬುದು ಸಾಬೀತಾಗಿದ್ದರೂ, ಆತ ಮಗುವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾನೆ. ಅಲ್ಲದೆ, ಸಂಧಾನದ ಹೆಸರಿನಲ್ಲಿ ಒಪ್ಪಿಕೊಳ್ಳಲಾಗದ ಕಠಿಣ ಷರತ್ತುಗಳನ್ನು ವಿಧಿಸಿರುವುದರಿಂದ ಸಂಧಾನದ ಎಲ್ಲಾ ಪ್ರಯತ್ನಗಳು ಈಗ ಸಂಪೂರ್ಣವಾಗಿ ಮುರಿದುಬಿದ್ದಿವೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕಾರಣ ಕಳೆದ ಮೂರು ತಿಂಗಳುಗಳಿಂದ ತಾವು ಮೌನ ವಹಿಸಬೇಕಾಯಿತು ಎಂದು ನಂಜುಂಡಿ ಸ್ಪಷ್ಟಪಡಿಸಿದರು. “ನಾನು ಆರೋಪಿಗಳೊಂದಿಗೆ ಶಾಮೀಲಾಗಿದ್ದೇನೆ ಅಥವಾ ಹಣಕ್ಕೆ ಬಗ್ಗಿದ್ದೇನೆ ಎಂಬ ಆರೋಪಗಳು ಕೇಳಿಬಂದವು. ಆದರೆ ನಾವು ನ್ಯಾಯಕ್ಕಾಗಿ ಪ್ರಚಾರವಿಲ್ಲದ ಹೋರಾಟ ನಡೆಸುತ್ತಿದ್ದೇವೆ. ಈ ಹಂತದಲ್ಲಿ ಸಂಧಾನದ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಲು ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್ ಮತ್ತು ಸತೀಶ್ ಕುಂಪಲ ಅವರಂತಹ ಪ್ರಮುಖ ನಾಯಕರ ಸಮ್ಮುಖದಲ್ಲಿ ಮಾತುಕತೆ ನಡೆಸಲಾಗಿತ್ತು. ಆದರೆ ಆರೋಪಿಗಳ ಹಠಮಾರಿ ಧೋರಣೆಯಿಂದಾಗಿ ಸಂಧಾನ ಅಸಾಧ್ಯವಾಗಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮುದಾಯವು ಹಿಂದುತ್ವದ ಮೌಲ್ಯಗಳನ್ನು ಮತ್ತು ಸಂಸ್ಕೃತಿಯನ್ನು ಗೌರವಿಸುವ ಸಮಾಜವಾಗಿದೆ. ಪುತ್ತೂರಿನಂತಹ ಧಾರ್ಮಿಕ ಕೇಂದ್ರದಲ್ಲಿ ನಮ್ಮ ಸಮುದಾಯದ ಹೆಣ್ಣುಮಗುವಿಗೆ ಇಂತಹ ಅನ್ಯಾಯವಾದಾಗ ನ್ಯಾಯ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಡಿಎನ್ಎ ಸಾಕ್ಷ್ಯವಿದ್ದರೂ ಮಗುವನ್ನು ತಿರಸ್ಕರಿಸುತ್ತಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ಹಿರಿಯ ವಕೀಲರೊಂದಿಗೆ ಚರ್ಚಿಸಿ, ಆರೋಪಿಗಳು ವಿಧಿಸಿರುವ ಅಸಂಗತ ಷರತ್ತುಗಳನ್ನು ದಾಖಲೆ ಸಮೇತ ಸದ್ಯದಲ್ಲೇ ಬಹಿರಂಗಪಡಿಸಲಾಗುವುದು. ಇನ್ನು ಮುಂದೆ ಕಾನೂನು ಹೋರಾಟವೇ ನಮಗಿರುವ ಏಕೈಕ ದಾರಿಯಾಗಿದ್ದು, ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಅವರ ಪರವಾಗಿ ನಿಲ್ಲುವುದಾಗಿ ನಂಜುಂಡಿ ಅವರು ಭರವಸೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









