ಮಂಗಳೂರು : ನಗರದ ಹೃದಯಭಾಗದಲ್ಲಿರುವ ಪಾಂಡೇಶ್ವರ – ಗೂಡ್ಸ್ ಶೆಡ್ ಪ್ರದೇಶದಲ್ಲಿ ರೈಲ್ವೇ ಗೇಟ್ನಿಂದಾಗಿ ದಿನನಿತ್ಯ ಉಂಟಾಗುತ್ತಿರುವ ಭಾರಿ ವಾಹನ ದಟ್ಟಣೆಯು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ನೆಮ್ಮದಿಗೆ ಭಂಗ ತಂದಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಹಿಂದೆ ಗೂಡ್ಸ್ ಮತ್ತು ಪ್ಯಾಸೆಂಜರ್ ರೈಲುಗಳ ದುರಸ್ತಿ ಕಾರ್ಯವನ್ನು ಉಳ್ಳಾಲಕ್ಕೆ ವರ್ಗಾಯಿಸಲಾಗುವುದು ಎಂಬ ಮಾಹಿತಿ ನೀಡಲಾಗಿತ್ತು. ಅಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸಂಸದರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದ್ದ ಸಭೆಯಲ್ಲಿ ಹೆಚ್ಚುವರಿ ರೈಲುಗಳ ನಿಲುಗಡೆಗೆ ಗೂಡ್ಸ್ ಶೆಡ್ ಜಾಗ ಬಳಸುವ ಬದಲು ಕಂಕನಾಡಿ ಅಥವಾ ಪಡೀಲ್ ಭಾಗಕ್ಕೆ ಸ್ಥಳಾಂತರಿಸಲು ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು. ಜೊತೆಗೆ ರೈಲ್ವೇ ಇಲಾಖೆಯ ಜಾಗವನ್ನು ಜಿಲ್ಲಾಡಳಿತದೊಂದಿಗೆ ವಿನಿಮಯ (SWAP) ಮಾಡಿಕೊಳ್ಳುವ ಹಾಗೂ ಪಾಂಡೇಶ್ವರ ರಸ್ತೆಯನ್ನು 4 ಪಥಗಳಾಗಿ ವಿಸ್ತರಿಸುವ ಬಗ್ಗೆಯೂ ಚರ್ಚಿಸಲಾಗಿತ್ತಾದರೂ, ತದನಂತರದ ಬೆಳವಣಿಗೆಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಈ ನಡುವೆ ಪ್ರಸ್ತುತ ಗೂಡ್ಸ್ ಶೆಡ್ ಪ್ರದೇಶದಲ್ಲಿ ರೈಲ್ವೇ ಇಲಾಖೆಯಿಂದ ಹಳೆ ಕಟ್ಟಡಗಳನ್ನು ತೆರವುಗೊಳಿಸಿ, ಹಳಿಯ ಸಮೀಪದಲ್ಲೇ ಮಣ್ಣನ್ನು ಸಮತಟ್ಟು ಮಾಡುವಂತಹ ಕಾಮಗಾರಿಗಳು ಭರದಿಂದ ನಡೆಯುತ್ತಿರುವುದು ನಾಗರಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದು ಮತ್ತೊಂದು ಹೊಸ ಹಳಿಯ ಸೇರ್ಪಡೆಗೋ ಅಥವಾ ಈ ನಗರ ಮಧ್ಯದ ಭಾಗಕ್ಕೆ ಇನ್ನಷ್ಟು ಹೆಚ್ಚಿನ ರೈಲುಗಳನ್ನು ತರುವ ಯೋಜನೆಯೋ ಎಂಬ ಚರ್ಚೆ ಶುರುವಾಗಿದ್ದು, ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣಗೊಳ್ಳುವ ಭೀತಿ ವ್ಯಕ್ತವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಶ್ರೀ ಅಂಬಾಮಹೇಶ್ವರೀ ಸೇವಾ ಟ್ರಸ್ಟ್ (ರಿ.) ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಹಾಗೂ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಾಗಿದ್ದು, ಅಧಿಕಾರಿಗಳ ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು










