ಮಂಗಳೂರು : ಇತ್ತೀಚೆಗೆ ಬೆಳಕಿಗೆ ಬಂದಿರುವ ನಕಲಿ ಟ್ರಾನ್ಸ್ಜೆಂಡರ್ ಗುರುತಿನ ಚೀಟಿ ದಂಧೆ ಹಾಗೂ ಸಮಾಜದಲ್ಲಿ ಸಮುದಾಯದ ಬಗ್ಗೆ ಹರಡುತ್ತಿರುವ ಅಪಪ್ರಚಾರವನ್ನು ಖಂಡಿಸಿ ‘ನವಹಸಜ ಸಮುದಾಯ ಸಂಘಟನೆ’ಯು ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿತು. ಲಿಂಗತ್ವ ಅಲ್ಪಸಂಖ್ಯಾತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಹಾಗೂ ಈ ಅಕ್ರಮಕ್ಕೆ ಸಹಕರಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಅಧ್ಯಕ್ಷೆ ನಿಖಿಲಾ ಒತ್ತಾಯಿಸಿದರು. ಮುಖ್ಯವಾಗಿ, ಅನಿ ಮಂಗಳೂರು ಎಂಬಾಕೆ ನಡೆಸಿದ್ದಾಳೆನ್ನಲಾದ ಅಕ್ರಮಗಳಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮೂಲತಃ ರಾಯಚೂರಿನ ಅನಿ ಮಂಗಳೂರು ಎಂಬಾಕೆ ಮೈಸೂರಿನ ಅಪರಿಚಿತ ವ್ಯಕ್ತಿಯೊಬ್ಬನನ್ನು ಮಂಗಳೂರಿಗೆ ಕರೆಸಿಕೊಂಡು, ಸಂಘಟನೆಗೆ ಮಾಹಿತಿ ನೀಡದೆ ನಕಲಿ ದಾಖಲೆಗಳ ಮೂಲಕ ಆತನಿಗೆ ರಾಷ್ಟ್ರೀಯ ಟ್ರಾನ್ಸ್ಜೆಂಡರ್ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಾಳೆ. ಪ್ರಸ್ತುತ ಆ ವ್ಯಕ್ತಿ ಸಮುದಾಯದ ವಿರುದ್ಧವೇ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾನೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಲಭ್ಯವಾದ ಮಾಹಿತಿಯಂತೆ ಇತ್ತೀಚೆಗೆ ವಿತರಿಸಲಾದ 50 ಟಿಜಿ ಕಾರ್ಡ್ಗಳಲ್ಲಿ ಹಲವು ನಕಲಿ ಇರುವ ಸಂಶಯವಿದ್ದು, ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸಮಗ್ರ ಮರುಪರಿಶೀಲನೆ (Verification) ನಡೆಸಬೇಕು ಎಂದು ನಿಖಿಲಾ ಆಗ್ರಹಿಸಿದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಭಿಕ್ಷಾಟನೆಗೆ ಇಳಿಯಲು ಇಂತಹ ನಕಲಿ ಕಾರ್ಡ್ಗಳನ್ನು ಮಾಡಿಸಲಾಗುತ್ತಿದ್ದು, ಇದರಿಂದ ನೈಜ ಮಂಗಳಮುಖಿಯರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಈಗ ಹೊರ ಜಿಲ್ಲೆಯ ಮತ್ತು ಹಿಂದಿ ಭಾಷಿಕರ ತಂಡಗಳು ಹೆಚ್ಚಾಗಿದ್ದು, ಸಿಗ್ನಲ್ಗಳಲ್ಲಿ ಸಮುದಾಯದ ವೇಷ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಹೆಂಡತಿ ಮಕ್ಕಳನ್ನು ಹೊಂದಿದ್ದರೂ ಟಿಜಿ ಕಾರ್ಡ್ ಪಡೆದಿರುವುದು ಆಘಾತಕಾರಿ ವಿಚಾರವಾಗಿದೆ. ಅನಿ ಮಂಗಳೂರು ತನ್ನ ಸಂಘಟನೆಯ ಬೋರ್ಡ್ ಮೆಂಬರ್ ಆಗಿದ್ದರೂ ನಂಜನಗೂಡಿನ ವ್ಯಕ್ತಿಗೆ ಐಡಿ ಮಾಡಿಸಿಕೊಟ್ಟ ವಿಚಾರವನ್ನು ಮುಚ್ಚಿಟ್ಟಿದ್ದಾಳೆ. ಐಡಿ ಕಾರ್ಡ್ ಕಳೆದುಹೋಗಿದೆ ಎಂದು ಆಕೆ ಸುಳ್ಳು ಹೇಳುತ್ತಿದ್ದು, ಇಡೀ ಪ್ರಕರಣದ ತನಿಖೆಯಾಗಬೇಕು. ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯ ಬಲಿಯಾಗಬಾರದು ಮತ್ತು ದಕ್ಷಿಣ ಕನ್ನಡದ ನೈಜ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾತ್ರ ನ್ಯಾಯ ಸಿಗಬೇಕು ಎಂದು ಸಂಘಟನೆಯು ಈ ವೇಳೆ ಆಗ್ರಹಿಸಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









