ಪುರ ಪ್ರವೇಶ ಮತ್ತು ಪೂರ್ಣಕುಂಭ ಸ್ವಾಗತ
ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪರ್ಯಾಯ ಪೂರ್ವಭಾವಿ ಸಂಚಾರದ ಅಂಗವಾಗಿ ಜನೆವರಿ 4ರಂದು ಶ್ರೀಗಳು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಉರ್ವಸ್ಟೋರ್ನ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರು ಸ್ವಾಗತ ಸಮಿತಿ ಹಾಗೂ ಭಕ್ತ ಸಮೂಹದ ವತಿಯಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುವುದು ಎಂದು ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಐದು ದಿನಗಳ ಕಾಲ ಭಕ್ತರ ಮನೆಗೆ ಭೇಟಿ
ಜನೆವರಿ 4 ರಿಂದ 8 ರವರೆಗೆ ಶೀರೂರು ಶ್ರೀಗಳು ಮಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದರ ಜೊತೆಗೆ, ಭಕ್ತರ ಮನೆಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಭಕ್ತಾದಿಗಳಿಗೆ ಪರ್ಯಾಯದ ಮಂತ್ರಾಕ್ಷತೆ (ರಾಯಸ) ನೀಡಿ ಆಶೀರ್ವದಿಸಲಿದ್ದಾರೆ. ಜನವರಿ 8 ರಂದು ಸಂಜೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದ ಆವರಣದಲ್ಲಿ ಶ್ರೀಪಾದರಿಗೆ ಸಾರ್ವಜನಿಕ ಪೌರ ಸನ್ಮಾನ ನೆರವೇರಲಿದೆ.
ಪಾದಪೂಜೆ ಮತ್ತು ಹೊರೆಕಾಣಿಕೆ ವಿವರ
ಶ್ರೀಗಳ ನಗರ ಸಂಚಾರದ ವೇಳೆ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಲು ಇಚ್ಛಿಸುವ ಭಕ್ತರು ಸ್ವಾಗತ ಸಮಿತಿಯ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ ಅಥವಾ ಸಂಚಾಲಕ ಗುರುಪ್ರಸಾದ್ ಕಡಂಬಾರ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಪರ್ಯಾಯ ಮಹೋತ್ಸವದ ಅಂಗವಾಗಿ ಮಂಗಳೂರಿನಿಂದ ಉಡುಪಿಗೆ ಜನೆವರಿ 15ರಂದು ಬೃಹತ್ ಹೊರೆಕಾಣಿಕೆ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಸುಧಾಕರ ರಾವ್ ಪೇಜಾವರ, ಗುರುಪ್ರಸಾದ್ ಕಡಂಬಾರ್, ಬಿ. ಸುಬ್ರಹ್ಮಣ್ಯ ರಾವ್ ಹಾಗೂ ಎಂ. ರವೀಂದ್ರ ಶೇಟ್ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿ ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









