ಮಂಗಳೂರು : ಸುರತ್ಕಲ್ ಸಮೀಪದ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 8ರಂದು ಬ್ರಹ್ಮಕಲಶೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ. ಬೆಳಿಗ್ಗೆ 11.15ರ ಶುಭ ಮುಹೂರ್ತದಲ್ಲಿ ವೇದಮೂರ್ತಿ ಶ್ರೀ ವೆಂಕಟೇಶ ತಂತ್ರಿ ಎಡಪದವು ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಈ ಮಹತ್ಕಾರ್ಯಕ್ಕಾಗಿ ದೇವಸ್ಥಾನವು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದ್ದು, ಬೆಳ್ಳಿ-ತಾಮ್ರದ ಹೊದಿಕೆಯ ಗರ್ಭಗುಡಿ ಹಾಗೂ ಆಕರ್ಷಕ ಗೋಪುರಗಳೊಂದಿಗೆ ಕ್ಷೇತ್ರವು ನವವಧುವಿನಂತೆ ಸಜ್ಜಾಗಿದೆ ಎಂದು ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮಾರ್ಚ್ 8ರಂದು ಸಂಜೆ ಸಸಿಹಿತ್ಲು ಸಮುದ್ರ ತೀರದಲ್ಲಿ ಕಾಶಿಯ ಮಾದರಿಯಲ್ಲೇ ಭವ್ಯ ‘ಸಮುದ್ರ ಆರತಿ’ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ನೂರಾರು ಅರ್ಚಕರು ಏಕಕಾಲದಲ್ಲಿ ಕಡಲ ಮಾತೆಗೆ ದೀಪಾರತಿ ಬೆಳಗಲಿದ್ದು, ಕರಾವಳಿಯ ಇತಿಹಾಸದಲ್ಲೇ ಇದು ಅಪರೂಪದ ಕ್ಷಣವಾಗಲಿದೆ. ಕಾರ್ಯಕ್ರಮಕ್ಕೆ ಪೂರಕವಾಗಿ 10 ಎಕರೆ ವಿಸ್ತೀರ್ಣದ ಪಾರ್ಕಿಂಗ್, ಅಶಕ್ತರಿಗಾಗಿ ಇವಿ ವಾಹನ ಸೌಲಭ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದಲ್ಲಿ ನಿರಂತರ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಭಕ್ತರಿಗಾಗಿ ಕಲ್ಪಿಸಲಾಗಿದೆ.
ಕ್ಷೇತ್ರದ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಸಮಿತಿ ಕಾರ್ಯಾಧ್ಯಕ್ಷ ವಾಮನ ಇಡ್ಯಾ ಅವರು, ದಾರಿಗಾಸುರನ ಸಂಹಾರಕ್ಕಾಗಿ ಅವತರಿಸಿದ ತಾಯಿ ಭಗವತಿಯು ಸಸಿಹಿತ್ಲಿನಲ್ಲಿ ನೆಲೆನಿಂತ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು. 10ನೇ ಶತಮಾನದ ಪಂಪನ ಸಾಹಿತ್ಯ ಹಾಗೂ 1305ರ ಶಾಸನಗಳಲ್ಲಿ ಈ ಕ್ಷೇತ್ರದ ಉಲ್ಲೇಖವಿರುವುದು ಇದರ ಪ್ರಾಚೀನತೆಗೆ ಸಾಕ್ಷಿಯಾಗಿದೆ. ಮಾರ್ಚ್ 4ರಂದು ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಆರಂಭವಾಗುವ ಈ ಧಾರ್ಮಿಕ ಸಪ್ತಾಹದಲ್ಲಿ ಮಾರ್ಚ್ 6ರಂದು ಆಯುತ ಕದಳಿ ಯಾಗ ಹಾಗೂ ಕುಂಕುಮಾರ್ಚನೆಯಂತಹ ವಿಶೇಷ ಸೇವೆಗಳು ನಡೆಯಲಿವೆ.
ದೇವಸ್ಥಾನದ ಪ್ರಧಾನ ಅರ್ಚಕರು, ಅನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಗಂಪಮನೆ ಕಟೀಲು ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ ಬಂಗೇರ ಕರಿತೋಟ, ಮಾತೃ ಮಂಡಳಿ ಅಧ್ಯಕ್ಷೆ ಕಸ್ತೂರಿ ಪಂಜ, ಸ್ವಯಂಸೇವಕರ ಸಮಿತಿಯ ಸಂಚಾಲಕ ವಿನೋದ್ ಸಾಲಿಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









