ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಾರ್ವಜನಿಕರ ಆಧಾರ್ ಕಾರ್ಡ್ಗಳು ವ್ಯಕ್ತಿಯು ಜೀವಂತವಿದ್ದರೂ ಮೃತಪಟ್ಟಿದ್ದಾರೆಂಬ ತಪ್ಪು ಕಾರಣ ನೀಡಿ ಡಿಲೀಟ್ ಆಗುತ್ತಿರುವುದು ಬೆಳಕಿಗೆ ಬಂದಿದೆ. ಈ ಗಂಭೀರ ಲೋಪದ ಬಗ್ಗೆ ಆಮ್ ಆದ್ಮಿ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ‘ಬಿ ನವೀನ್ ಚಂದ್ರ ಪೂಜಾರಿ’ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದಾರೆ. ರಾಜ್ಯಾದ್ಯಂತ ಸುಮಾರು ’12 ಲಕ್ಷ’ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು ‘30,000’ ಮಂದಿಯ ಆಧಾರ್ ಕಾರ್ಡ್ಗಳು ಅಳಿಸಿಹೋಗಿರುವ ಅಂದಾಜಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ತಾಂತ್ರಿಕ ಅವ್ಯವಸ್ಥೆಯಿಂದಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಂಗಳೂರಿನ ‘ಆಕಾಶಭವನ’ ಮತ್ತು ‘ಉಳ್ಳಾಲ’ ಭಾಗದ ಮಹಿಳೆಯರ ಆಧಾರ್ ಕಾರ್ಡ್ಗಳು ಡಿಲೀಟ್ ಆಗಿರುವ ಬಗ್ಗೆ ದೂರುಗಳು ಬಂದಿವೆ. ಆಶ್ರಯ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಯೊಬ್ಬರಿಗೆ, ಅವರು ಮೃತಪಟ್ಟಿದ್ದಾರೆಂಬ ಕಾರಣ ನೀಡಿ ಆಧಾರ್ ರದ್ದುಗೊಳಿಸಿರುವುದು ವ್ಯವಸ್ಥೆಯ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಪೂಜಾರಿ ಟೀಕಿಸಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಅರ್ಜಿ ಸಲ್ಲಿಸಿದ ’45 ದಿನ’ ಗಳೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಆ ಅವಧಿಯಲ್ಲಿ ಬಡವರು ರೇಷನ್ ಹಾಗೂ ಇತರೆ ಸವಲತ್ತುಗಳಿಲ್ಲದೆ ಸಂಕಷ್ಟ ಅನುಭವಿಸಲಿದ್ದಾರೆ. ಈ ಸಮಸ್ಯೆಯ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ಎಎಪಿ ಮುಖಂಡರು, ಮುಂದಿನ ’10 ದಿನ’ ಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ‘ರವಿ ಪ್ರಸಾದ್’, ‘ಕುಶಲ್ ಕುಮಾರ್’, ‘ಪಾಂಡುರಂಗ’, ‘ದ್ಯಾವಪ್ಪ ಗಿರಿಯಪ್ಪಣ್ಣವರ್’ ಮತ್ತು ‘ಸಂದೀಪ್ ಶೆಟ್ಟಿ ಅಡ್ಕ’ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









