ಮಂಗಳೂರು : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗೋಮಾಂಸ ಸಾಗಾಟ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹಂಚಿಕೊಂಡಿರುವ ಬಗ್ಗೆ ಮಂಗಳೂರು ಪೊಲೀಸರು ‘ಸ್ವಯಂಪ್ರೇರಿತ ಕೇಸು’ ದಾಖಲಿಸಿಕೊಂಡಿದ್ದಾರೆ. ‘muslim_leader’ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಇಬ್ಬರು ಯುವಕರ ಫೋಟೋ ಬಳಸಿ, ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಬರಹಗಳನ್ನು ಪ್ರಕಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 27 ರಂದು ಬಜಪೆಯ ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತ ತನ್ನ ಮಗಳೊಂದಿಗೆ ಸ್ಕೂಟರ್ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಎನ್ನಲಾದ ವೇಳೆ, ‘ಸುಮಿತ್ ಮತ್ತು ರಜತ್ ನಾಯಕ್’ ಎಂಬವರು ತಡೆದು ನಿಲ್ಲಿಸಿದ್ದರು. ಈ ಘಟನೆಗೆ ಸಂಬಂಧಿಸಿ ಈಗಾಗಲೇ ಪರಸ್ಪರ ದೂರುಗಳು ದಾಖಲಾಗಿವೆ. ಆದರೆ, ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ಸಂಘ ಪರಿವಾರವನ್ನು ಗುರಿಯಾಗಿಸಿ ‘ಭಯೋತ್ಪಾದಕರು’ ಎಂದು ಹೀಯಾಳಿಸಿ ಪ್ರಚೋದನಕಾರಿ ಪೋಸ್ಟ್ ಹಾಕಲಾಗಿದೆ.
ಸದ್ರಿ ಪೋಸ್ಟ್ನಲ್ಲಿ “ಸಂಘಗಳ ಅಟ್ಟಹಾಸ ಮಿತಿಮೀರುತ್ತಿದೆ, ಇವರಿಗೆ ಕಾನೂನಿನ ಭಯವಿಲ್ಲ, ನಾವು ಗೋಮಾಂಸ ತಿನ್ನುತ್ತೇವೆ ಏನು ಮಾಡುತ್ತೀರಾ?” ಎಂಬ ಸವಾಲಿನ ಜೊತೆಗೆ ಹದಿಹರೆಯದ ಮಕ್ಕಳ ಬಗ್ಗೆಯೂ ಪ್ರಸ್ತಾಪಿಸಿ ಆಕ್ರೋಶಕಾರಿ ಸಾಲುಗಳನ್ನು ಬರೆಯಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಸಿಸಿಬಿ ಮತ್ತು ಸೈಬರ್ ಕ್ರೈಮ್ ಪೊಲೀಸರು, ಸಮಾಜದ ಶಾಂತಿ ಕದಡುವ ಇಂತಹ ಪ್ರಯತ್ನಗಳ ವಿರುದ್ಧ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ‘ಶೋಧ ಕಾರ್ಯ’ ಚುರುಕುಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









