ಮಂಗಳೂರು : ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಭಕ್ತರ ತಂಡದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಂಟ್ವಾಳ ಮೂಲದ 9ನೇ ತರಗತಿಯ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೇರಳದ ಕೊಟ್ಟಕ್ಕಲ್ ಬಳಿ ನಡೆದಿದೆ. ಮೃತನನ್ನು ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಎಂಬವರ ಪುತ್ರ ಲಕ್ಷ್ಮೀಶ್ ಪೂಜಾರಿ (15) ಎಂದು ಗುರುತಿಸಲಾಗಿದೆ.
ಜನೆವರಿ 7 ರಂದು ತಂದೆಯೊಂದಿಗೆ ಶಬರಿಮಲೆಗೆ ತೆರಳಿದ್ದ ಲಕ್ಷ್ಮೀಶ್, ಜನೆವರಿ 9 ರಂದು ತಂಡದೊಂದಿಗೆ ಇನ್ನೋವಾ ಕಾರಿನಲ್ಲಿ ವಾಪಾಸ್ ಬರುತ್ತಿದ್ದರು. ರಾತ್ರಿ ವೇಳೆ ಕೊಟ್ಟಕ್ಕಲ್ ಬಳಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಾಗ, ವಾಹನವನ್ನು ರಸ್ತೆ ಬದಿ ನಿಲ್ಲಿಸಿ ರಿಪೇರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚಾಲಕ ಹಾಗೂ ತಂಡದ ಸದಸ್ಯರು ಬಾನೆಟ್ ತೆರೆದು ಪರೀಕ್ಷಿಸುತ್ತಿದ್ದಾಗ, ವೇಗವಾಗಿ ಬಂದ ಲಾರಿ ಕಾರಿನ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಬಳಿ ನಿಂತಿದ್ದವರೆಲ್ಲರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಲಾರಿಯ ಚಕ್ರದಡಿಗೆ ಸಿಲುಕಿದ ಲಕ್ಷ್ಮೀಶ್ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ವರದರಾಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಉಳಿದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









