ಮಂಗಳೂರು : ಮಂಗಳೂರಿನ ಬೈಕಂಪಾಡಿಯಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಗ್ರೂಪ್ ‘ಡಿ’ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಮಕ್ಕಳ ತಾಯಿಯೊಬ್ಬರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿ.ಎಚ್. ಮೋಹನ್ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುದೀರ್ಘ ಅವಧಿಯಿಂದ ಮಹಿಳಾ ಸಿಬ್ಬಂದಿಗೆ ಅಸಹ್ಯವಾಗಿ ವರ್ತಿಸುತ್ತಿದ್ದ ಅಧಿಕಾರಿಯು, ತಮ್ಮ ಬೇಡಿಕೆಗೆ ಒಪ್ಪಿದರೆ 15,000 ರೂ. ಇರುವ ವೇತನವನ್ನು 25,000 ರೂ.ಗೆ ಏರಿಸುವುದಾಗಿ ಆಮಿಷ ಒಡ್ಡಿದ್ದರೆನ್ನಲಾಗಿದೆ. ಆದರೆ ನೌಕರರು ಇದಕ್ಕೆ ಸಮ್ಮತಿಸದಿದ್ದಾಗ ಕಚೇರಿ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಉದ್ಯೋಗಕ್ಕೆ ನಿಯೋಜಿಸಿ ಕಿರುಕುಳ ನೀಡಲಾಗಿತ್ತು.
ಕಳೆದ ಶನಿವಾರ ಆರೋಪಿ ಅಧಿಕಾರಿಯು ಸಂತ್ರಸ್ತೆಗೆ ಫೋನ್ ಮಾಡಿ, ತಮ್ಮ ಬೇಡಿಕೆಗೆ ಸಮ್ಮತಿ ಇದ್ದರೆ ಸೋಮವಾರ ಹಸಿರು ಬಣ್ಣದ ಸೀರೆ ಅಥವಾ ಉಡುಪು ಧರಿಸಿ ಕಚೇರಿಗೆ ಬರಬೇಕೆಂದು ಷರತ್ತು ವಿಧಿಸಿದ್ದನೆನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ಮುಖಂಡರ ತಂಡವು ಸಾಂಕೇತಿಕವಾಗಿ ಹಸಿರು ಸೀರೆಯುಟ್ಟು ಸೋಮವಾರ ಎಪಿಎಂಸಿ ಕಚೇರಿಗೆ ದಿಢೀರ್ ದಾಳಿ ನಡೆಸಿತು. ಹಸಿರು ಉಡುಪಿನಲ್ಲಿ ಆಗಮಿಸಿದ ಮಹಿಳಾ ಪಡೆಯನ್ನು ಕಂಡು ದಿಗ್ಭ್ರಮೆಗೊಂಡ ಅಧಿಕಾರಿಯನ್ನು ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ತಪರಾಕಿ ನೀಡಿದ್ದಲ್ಲದೆ, ಆತನ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಪಣಂಬೂರು ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಚೇರಿಗೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸಂತ್ರಸ್ತೆ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ದೂರು ನೀಡಿದ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಪ್ರತಿಭಾ ಕುಳಾಯಿ ಎಪಿಎಂಸಿ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ಅಧಿಕೃತ ದೂರು ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಣಂಬೂರು ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










