ಮಂಗಳೂರು : ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದ್ವೇಷ ಭಾಷಣ ತಡೆ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿಲ್ಲ ಅಥವಾ ತಿರಸ್ಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಸದನದಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿರುವ ಈ ಮಸೂದೆಗೆ ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ ಅಷ್ಟೆ. ಈ ಕುರಿತು ಅವರು ವಿವರಣೆ ಕೇಳಿ ಕರೆದಾಗ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಳ್ಳಾರಿಯಿಂದ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಾದಯಾತ್ರೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ತಾವು ಅಕ್ರಮ ಗಣಿಗಾರಿಕೆ ವಿರುದ್ಧ ಸವಾಲು ಸ್ವೀಕರಿಸಿ ಪಾದಯಾತ್ರೆ ಮಾಡಿದ್ದಾಗಿ ನೆನಪಿಸಿದರು. ಆದರೆ ಈಗಿನ ಬಿಜೆಪಿ ನಾಯಕರು ಪಾದಯಾತ್ರೆ ಮಾಡಲು ಯಾವ ಕಾರಣವಿದೆ ಎಂದು ಪ್ರಶ್ನಿಸಿದ ಅವರು, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಅಧಿಕಾರ ಕಳೆದುಕೊಂಡ ಅಸೂಯೆಯಿಂದ ಇಂತಹ ವರ್ತನೆ ತೋರುತ್ತಿದ್ದಾರೆ ಎಂದು ಟೀಕಿಸಿದರು.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ಬ್ಯಾನರ್ ತೆರವುಗೊಳಿಸಿದ ವಿಚಾರವೇ ಘಟನೆಗೆ ಪ್ರಚೋದನೆಯಾಯಿತು ಎಂದ ಮುಖ್ಯಮಂತ್ರಿಗಳು, ಬ್ಯಾನರ್ ತೆಗೆಯುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಇದೇ ವೇಳೆ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ನಲ್ಲಿ ಯಾವುದೇ ಕುರ್ಚಿ ಕಾಳಗವಿಲ್ಲ, ಇದೆಲ್ಲವೂ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದು ಸ್ಪಷ್ಟನೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









