ಉಡುಪಿ : ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ನೀಡಬೇಕಾದ ಸ್ಥಾನದಲ್ಲಿರುವವರು ಅಮಾನವೀಯವಾಗಿ ನಡೆದುಕೊಂಡ ಘಟನೆಯೊಂದು ಉಡುಪಿ ಜಿಲ್ಲೆಯ ಕೋಟ ಸಮೀಪದ ಸಾಸ್ತಾನ ಟೋಲ್ ಗೇಟ್ನಲ್ಲಿ ನಡೆದಿದೆ. ಜನವರಿ 25ರ ರಾತ್ರಿ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ ಅವರು ಪ್ರಯಾಣಿಸುತ್ತಿದ್ದ ವೇಳೆ, ಅವರಿಗೆ ನೀಡಬೇಕಾದ ಟೋಲ್ ವಿನಾಯಿತಿಯನ್ನು ನಿರಾಕರಿಸಿ ಸಿಬ್ಬಂದಿಗಳು ಅವಮಾನ ಮಾಡಿದ್ದರು. ಈ ಹಿಂದೆ ಸೇನಾ ಸೇವೆಯಲ್ಲಿದ್ದಾಗ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಸೇನಾ ವಾಹನವು 400 ಅಡಿ ಪ್ರಪಾತಕ್ಕೆ ಬಿದ್ದಾಗ ಪವಾಡಸದೃಶ್ಯವಾಗಿ ಬದುಕುಳಿದಿದ್ದ ಶ್ಯಾಮರಾಜ ಅವರು, ಪ್ರಸ್ತುತ ವೀಲ್ ಚೇರ್ ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ. ಇಂತಹ ಹಿರಿಯ ಜೀವಕ್ಕೆ ಗಣರಾಜ್ಯೋತ್ಸವದ ಸಂದರ್ಭದಲ್ಲೇ ಟೋಲ್ ಸಿಬ್ಬಂದಿ ಅಗೌರವ ತೋರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಘಟನೆಯ ಕುರಿತು ಆರ್ಮಿ ಕಮಾಂಡರ್ ಶ್ಯಾಮರಾಜ ಅವರು ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. “ನಮಗೆ ದೇಶದ ಗೌರವ ಮುಖ್ಯವೇ ಹೊರತು ಹಣವಲ್ಲ, ಆದರೆ ಗಣರಾಜ್ಯೋತ್ಸವದ ಸಂಭ್ರಮದ ನಡುವೆಯೇ ಯೋಧರಿಗೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ” ಎಂದು ಅವರು ವ್ಯಥೆ ಪಟ್ಟಿದ್ದರು. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಟೋಲ್ ಸಿಬ್ಬಂದಿ ಮತ್ತು ಮ್ಯಾನೇಜ್ಮೆಂಟ್ ಈಗ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಯು ಯೋಧರಿಗೆ ನೀಡಲಾಗುವ ವಿನಾಯಿತಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಗೊಂದಲ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಟೋಲ್ ಸಿಬ್ಬಂದಿ, “ಯೋಧರಿಗೆ ಟೋಲ್ ವಿನಾಯಿತಿ ನೀಡುವ ಬಗ್ಗೆ ನನಗೆ ಪೂರ್ಣ ಮಾಹಿತಿ ಇರಲಿಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ವಿವರಗಳನ್ನು ಕಳುಹಿಸಿದ್ದೆ, ಆದರೆ ಅವರಿಂದ ಮಾಹಿತಿ ಬರುವುದು ತಡವಾದ ಕಾರಣ ಗೊಂದಲ ಉಂಟಾಯಿತು. ಸ್ಥಳದಲ್ಲೇ ಯೋಧರ ಬಳಿ ಕ್ಷಮೆ ಕೇಳಿದ್ದೆ, ಈಗ ಮತ್ತೊಮ್ಮೆ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ” ಎಂದು ಹೇಳಿದ್ದಾರೆ. ಸೈನಿಕರ ತ್ಯಾಗ ಮತ್ತು ಬಲಿದಾನಗಳನ್ನು ಗೌರವಿಸುವ ಬದಲು ಸಣ್ಣ ತಾಂತ್ರಿಕ ಕಾರಣಗಳಿಗಾಗಿ ಅವರಿಗೆ ತೊಂದರೆ ನೀಡುವ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









