ಮಂಗಳೂರು : ಶ್ರೀ ಕ್ಷೇತ್ರ ಅರ್ಕುಳದ ಧರ್ಮದೇವತೆಗಳ ಅನುಗ್ರಹ ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದರ ಭಾಗವಾಗಿ ಈ ವರ್ಷ ಕ್ಷೇತ್ರದಲ್ಲಿ ನೂತನ ಕಾಷ್ಠ ಶಿಲ್ಪದ ಅಶ್ವರಥವನ್ನು (ಅಶ್ವ ಬಂಡಿ) ನಿರ್ಮಿಸಲಾಗುತ್ತಿದೆ ಎಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರು ತಿಳಿಸಿದ್ದಾರೆ. ಅರ್ಕುಳ ಬೀಡಿನಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 1 ರವರೆಗೆ ನಡೆಯಲಿರುವ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನೂತನವಾಗಿ ನಿರ್ಮಾಣಗೊಂಡಿರುವ ಅಶ್ವರಥದ ಭವ್ಯ ಶೋಭಾಯಾತ್ರೆಯು ಫೆಬ್ರವರಿ 15 ರವಿವಾರ ಸಂಜೆ 4 ಗಂಟೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಿಂದ ಹೊರಟು ಶ್ರೀ ಕ್ಷೇತ್ರ ಅರ್ಕುಳವನ್ನು ತಲುಪಲಿದೆ ಎಂದು ಕಂಪ ಸದಾನಂದ ಆಳ್ವ ಅವರು ಮಾಹಿತಿ ನೀಡಿದ್ದಾರೆ. ಈ ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡಗಳು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತುಪ್ಪೆಕಲ್ಲು ನಾಗರಾಜ ಶೆಟ್ಟಿ ಮತ್ತು ಟಿ. ರಘುನಾಥ ಪೂಜಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಎ. ಜಯಕುಮಾರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಮಂಟಮೆ ದಿನಕರ ಕರ್ಕೇರಾ ಅವರು ಧನ್ಯವಾದ ಸಮರ್ಪಿಸಿದರು. ಕರಾವಳಿಯ ಸಾಂಪ್ರದಾಯಿಕ ಕಾಷ್ಠ ಶಿಲ್ಪಕಲೆಯಿಂದ ಸಿದ್ಧಗೊಂಡಿರುವ ಈ ನೂತನ ರಥವು ಕ್ಷೇತ್ರದ ಸಾಂಸ್ಕೃತಿಕ ಪರಂಪರೆಗೆ ಹೊಸ ಮೆರುಗು ನೀಡಲಿದ್ದು, ಜಾತ್ರಾ ಮಹೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









