ಮಂಗಳೂರು : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ಆರೆಸ್ಸೆಸ್ ಮತ್ತು ಬಿಜೆಪಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ‘ದೆವ್ವ ಮತ್ತು ಅದರ ನೆರಳು’ ಎಂಬ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಿಯಾಂಕ್ ಖರ್ಗೆ ಅವರ ತಂದೆ ಎಐಸಿಸಿ ಅಧ್ಯಕ್ಷರಾಗಿದ್ದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಅಧೀನದಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆಯವರನ್ನು ಗಾಂಧಿ ಕುಟುಂಬದ ನೆರಳು ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಟೀಕಿಸಿದರು. ಆರೆಸ್ಸೆಸ್ ದೇಶಾಭಿಮಾನಿ ಸ್ವಯಂಸೇವಕರ ಆಧಾರದ ಮೇಲೆ ನಡೆಯುವ ಸಂಸ್ಥೆಯಾಗಿದ್ದು, ಇದನ್ನು ಟೀಕಿಸಲು ಕಾಂಗ್ರೆಸ್ನವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ಗುಡುಗಿದರು.
ದಕ್ಷಿಣ ಕನ್ನಡ ಜಿಲ್ಲೆಯು ಕೋಮು ಭಾವನೆಯಿಂದಾಗಿ ಅಭಿವೃದ್ಧಿಯಾಗುತ್ತಿಲ್ಲ ಎಂಬ ಸಚಿವರ ಆರೋಪಕ್ಕೆ ಅಂಕಿ-ಅಂಶಗಳ ಸಮೇತ ಸವಾಲು ಹಾಕಿದ ಕುಂಪಲ, ಕಳೆದ ಎರಡೂವರೆ ವರ್ಷಗಳಿಂದ ಐಟಿ-ಬಿಟಿ ಸಚಿವರಾಗಿ ಜಿಲ್ಲೆಗೆ ಪ್ರಿಯಾಂಕ್ ಖರ್ಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ ಅಥವಾ ಎಷ್ಟು ಬಂಡವಾಳ ತಂದಿದ್ದೀರಿ ಎಂಬ ಬಗ್ಗೆ ವಿವರ ನೀಡಲಿ ಎಂದರು. ಜಿಲ್ಲೆಯಲ್ಲಿ ಗಲಭೆ ಮತ್ತು ಅಶಾಂತಿ ಸೃಷ್ಟಿಯಾಗಿರುವುದು ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಹೊರತು ಬಿಜೆಪಿಯಿಂದಲ್ಲ ಎಂದು ಅವರು ಆರೋಪಿಸಿದರು.
ಇದೇ ವೇಳೆ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಗಿಗೂ ದಕ್ಷಿಣ ಕನ್ನಡಕ್ಕೂ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಿದ ಸತೀಶ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳಿದ್ದು ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣಕ್ಕಾಗಿ ಬರುತ್ತಾರೆ. ಆದರೆ ಅತೀ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದ ಸಚಿವರು, ಶೈಕ್ಷಣಿಕವಾಗಿ ಮುಂದುವರಿದಿರುವ ದಕ್ಷಿಣ ಕನ್ನಡದ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









