ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ 15 ರಿಂದ ಕಾರ್ಯಾರಂಭಿಸಲಿರುವ ಆಮ್ ಆದ್ಮಿ ಪಾರ್ಟಿ

1:26 PM, Thursday, February 14th, 2013
Share
1 Star2 Stars3 Stars4 Stars5 Stars
(No Ratings Yet)
Loading...

Aam Admi Partyಮಂಗಳೂರು : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜನಲೋಕಪಾಲ ಮಸೂದೆಯೆ ಸೂಕ್ತ ಎಂದು ಹೇಳಿದ ಆರ್ ಟಿಐ ಕಾರಯಕರ್ತ ಅರವಿಂದ್ ಕೆಜ್ರೀವಾಲರ ಆಮ್ ಆದ್ಮಿ ಪಕ್ಷ ಫೆಬ್ರವರಿ 15 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿದೆ ಎಂದು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಎಸ್. ನಂದಗೋಪಾಲ್ ತಿಳಿಸಿದರು. ಅವರು ನಿನ್ನೆ ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.

ಈಗಾಗಲೇ ಬೆಂಗಳೂರಿನಲ್ಲಿ ಪ್ರಾರಂಭವಾದ ಪಕ್ಷವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಇತರೆ ಭಾಗಗಳಾದ ಮೈಸೂರು, ಗುಲ್ಬರ್ಗ, ಬಿಜಾಪುರ, ಬೀದರ್, ಕಾರವಾರ ಮತ್ತು ಉಡುಪಿಯಲ್ಲಿ ಕಾರ್ಯಾಚರಿಸುತ್ತಿದ್ದು, ನಾಳೆಯಿಂದ ದಕ್ಷಿಣ ಕನ್ನಡದಲ್ಲೂ ಅಸ್ಥಿತ್ವಕ್ಕೆ ಬರಲಿದೆ ಎಂದರು.

ಪಾರ್ಟಿಯ ಜಿಲ್ಲಾ ಘಟಕವನ್ನು ರಾಜಕೀಯ ವಿಮರ್ಶಕ ಹಾಗೂ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪ್ರೊ.ಯೋಗೀಂದರ್ ಯಾದವ್ ಅಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ಉದ್ಘಾಟಿಸಲಿದ್ದಾರೆ. ಯಾದವ್ ಅವರ ಮುಂದಾಳತ್ವದಲ್ಲಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ, ಮೈಸೂರು ವಿಭಾಗದ ಸಂಚಾಲಕ ಚಂದ್ರಕಾಂತ್, ಪ್ರಮೋದ್ ಕರ್ಕೇರ ಹಾಗೂ ಹರಿಹರನ್ ಅವರನ್ನೊಳಗೊಂಡ ತಂಡವು ಪಕ್ಷವನ್ನು ದೇಶದಾದ್ಯಂತ ತಳಮಟ್ಟದಲ್ಲಿ ಬಲಗೊಳಿಸುವ ಯೋಜನೆಯಾದ ಮಿಶನ್ ಬುನಿಯಾದ್ ಗೆ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ  ಕನ್ನಡ ಜಿಲ್ಲಾ ಸಂಚಾಲಕ  ರಾಬರ್ಟ್ ರೊಸಾರಿಯೊ, ಕೋಶಾಧಿಕಾರಿ ಆಗ್ನೆಲ್ ಪಿರೇರಾ, ಕಾರ್ಯದರ್ಶಿ ರೋಶನ್ ಶಿರಿ, ಮಂಗಳೂರು ಕ್ಷೇತ್ರ ಸಂಚಾಲಕ ಸಜಿತ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English