ಉಡುಪಿ : ಮಲ್ಪೆ ಬಂದರು ಸಮೀಪ ಮೀನುಗಾರರೊಬ್ಬರ ಮೇಲೆ ಭೀಕರ ಹಲ್ಲೆ ನಡೆಸಿ, ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ದೋಚಿದ ಘಟನೆ ಬೆಳಕಿಗೆ ಬಂದಿದೆ. ಬಡಾನಿಡಿಯೂರು ಗ್ರಾಮದ ನಿವಾಸಿ ಹಾಗೂ ಮೀನುಗಾರಿಕೆ ವೃತ್ತಿಯಲ್ಲಿರುವ ದಯಾನಂದ ಕುಂದರ್ (61) ಎಂಬುವವರೇ ಈ ಕೃತ್ಯಕ್ಕೆ ಬಲಿಯಾದವರು. ಫೆಬ್ರವರಿ 20ರ ಮುಂಜಾನೆ ಅವರು ಎಂದಿನಂತೆ ಕೆಲಸಕ್ಕಾಗಿ ಬಂದರಿಗೆ ಆಗಮಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೆಳಿಗ್ಗೆ ಸುಮಾರು 4:40ರ ವೇಳೆಗೆ ದಯಾನಂದ ಅವರು ಬಂದರಿನ ಶೌಚಾಲಯದಿಂದ ವಾಪಸ್ ಬರುತ್ತಿದ್ದಾಗ, ಅಪರಿಚಿತನೊಬ್ಬ ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಅವರ ಬಳಿ ಬಂದಿದ್ದಾನೆ. ಕೂಡಲೇ ಆತ ದಯಾನಂದ ಅವರ ಮುಖಕ್ಕೆ ಖಾರದ ಪುಡಿ ಎರಚಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾನೆ. ಅಷ್ಟರಲ್ಲಿ ಮುತ್ತಣ್ಣ ಎಂಬಾತ ಹಾಗೂ ಆತನ ಇಬ್ಬರು ಸಹಚರರು ಸೇರಿಕೊಂಡು ಚಾಕು ತೋರಿಸಿ ಬೆದರಿಕೆ ಹಾಕಿ, ಚಿನ್ನದ ಸರ ನೀಡುವಂತೆ ಪೀಡಿಸಿದ್ದಾರೆ.
ದಯಾನಂದ ಅವರು ಸರ ನೀಡಲು ನಿರಾಕರಿಸಿದಾಗ, ಆರೋಪಿಗಳು ಅವರ ಮುಖ ಹಾಗೂ ಬೆನ್ನಿಗೆ ಮನಸೋಇಚ್ಛೆ ಹಲ್ಲೆ ನಡೆಸಿ ಸುಮಾರು ಆರು ಪವನ್ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









