ಮಂಗಳೂರು : ಉಳ್ಳಾಲದ ಕೊಲ್ಯ ಎಂಬಲ್ಲಿ ಶನಿವಾರ ಮಧ್ಯಾಹ್ನ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಲೂಡೋ ಕಾಯಿನ್ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ಮಧೂರು ಮೂಲದ ರಾಜೇಶ್ ಗಟ್ಟಿ ಹಾಗೂ ರಾಜೇಶ್ವರಿ ದಂಪತಿಯ ಪುತ್ರಿ, ದ್ವಿತೀಯ ತರಗತಿ ವಿದ್ಯಾರ್ಥಿನಿ ತನುಷ್ಕ (8) ಮೃತಪಟ್ಟ ದುರ್ದೈವಿ. ಬಾಲಕಿಯ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಉದ್ಯೋಗದ ಅನುಕೂಲಕ್ಕಾಗಿ ಈ ಕುಟುಂಬ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು.
ಶನಿವಾರ ಸಂಜೆ ತನುಷ್ಕ ತನ್ನ ಸಹೋದರ ಮತ್ತು ಸಹೋದರಿಯೊಂದಿಗೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಶಂಕು ಆಕಾರದ ಪ್ಲಾಸ್ಟಿಕ್ ಕಾಯಿನ್ ಅನ್ನು ನುಂಗಿದ್ದಾಳೆ. ತಕ್ಷಣವೇ ಬಾಲಕಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಸ್ಥಿತಿ ಗಂಭೀರಗೊಂಡಿದೆ. ಇದರಿಂದ ಗಾಬರಿಗೊಂಡ ತಾಯಿ ನೆರೆಹೊರೆಯವರ ಸಹಾಯದೊಂದಿಗೆ ಮಗುವನ್ನು ಮೊದಲು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವೇಳೆ ಬಾಲಕಿಯ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್ ಆಟಿಕೆ ಪತ್ತೆಯಾಗಿದೆ. ಮೃತ ತನುಷ್ಕ ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಈ ಅನಿರೀಕ್ಷಿತ ಘಟನೆಯಿಂದ ಇಡೀ ಕುಟುಂಬ ಹಾಗೂ ಸ್ಥಳೀಯರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳೊಂದಿಗೆ ಆಟವಾಡುವಾಗ ಪೋಷಕರು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಈ ಘಟನೆ ಕಣ್ಣೀರಿನ ಪಾಠವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









