ಮಂಗಳೂರು : ನಗರದ ರಾಮಕೃಷ್ಣ ಮಠದ ಆಶ್ರಯದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ಪ್ರಬೋಧ’26’ ವಿಶೇಷ ಉಪನ್ಯಾಸ ಮಾಲಿಕೆಯ ಮೊದಲ ದಿನದ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ದೊರೆಯಿತು. ಅಮೆರಿಕದ ನ್ಯೂಯಾರ್ಕ್ ವೇದಾಂತ ಸೊಸೈಟಿಯ ರೆಸಿಡೆಂಟ್ ಮಿನಿಸ್ಟರ್ ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಸರ್ವಪ್ರಿಯಾನಂದಜಿ ಅವರು ಈ ಉಪನ್ಯಾಸ ಮಾಲಿಕೆಯನ್ನು ನಡೆಸಿಕೊಡುತ್ತಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೀಸಲಾಗಿದ್ದ ಮೊದಲ ಅವಧಿಯನ್ನು ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಡಾ. ಜೀವರಾಜ್ ಸೊರಕೆ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಸ್ವಾಮಿ ಸರ್ವಪ್ರಿಯಾನಂದಜಿ ಅವರು ‘ದಿ ಪವರ್ ಆಫ್ ಫೋಕಸ್ ಇನ್ ಏಜ್ ಆಫ್ ಡಿಸ್ಟ್ರಾಕ್ಷನ್’ (ವಿಚಲಿತಗೊಳಿಸುವ ಯುಗದಲ್ಲಿ ಏಕಾಗ್ರತೆಯ ಶಕ್ತಿ) ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉಪನ್ಯಾಸದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಸರ್ವಪ್ರಿಯಾನಂದಜಿ, ಪ್ರಸ್ತುತ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳು ಮಾನವನ ಗಮನವನ್ನು ಸೆಳೆಯುವ ಮೂಲಕ ಅದನ್ನೇ ಒಂದು ವಾಣಿಜ್ಯ ಸರಕನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ಎಚ್ಚರಿಸಿದರು. ನಿರಂತರವಾಗಿ ಬರುವ ಮೊಬೈಲ್ ನೋಟಿಫಿಕೇಶನ್ಗಳು, ಸಂದೇಶಗಳು ಹಾಗೂ ಡಿಜಿಟಲ್ ಆಕರ್ಷಣೆಗಳು ನಮ್ಮ ಏಕಾಗ್ರತೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿವೆ. ಕೆಲವರು ಆನ್ಲೈನ್ ಜೂಜಾಟದಂತಹ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದು, ಇಂತಹ ವ್ಯಸನಗಳು ನಿಧಾನವಾಗಿ ಮಾನಸಿಕ ಅಶಾಂತಿ ಮತ್ತು ಚಡಪಡಿಕೆಗೆ ದಾರಿ ಮಾಡಿಕೊಡುತ್ತವೆ ಎಂದು ಅವರು ವಿಶ್ಲೇಷಿಸಿದರು.
ಡಿಜಿಟಲ್ ವ್ಯಸನದಿಂದ ಹೊರಬರಲು ಪರಿಹಾರ ಸೂಚಿಸಿದ ಸ್ವಾಮೀಜಿ, ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು, ಸಂಗೀತ ಕಲಿಯುವುದು ಹಾಗೂ ಸಂಗೀತ ವಾದ್ಯಗಳನ್ನು ನುಡಿಸುವಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಬಹುದು ಎಂದರು. ಇಂತಹ ಅಭ್ಯಾಸಗಳು ಮನಸ್ಸಿಗೆ ಸೂಕ್ತ ತರಬೇತಿ ನೀಡುವುದರೊಂದಿಗೆ ಗಮನವನ್ನು ಒಂದೆಡೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಪಾರ ಏಕಾಗ್ರತೆಯನ್ನು ಸಾಧಿಸಿದ ವ್ಯಕ್ತಿಯು ತಾನು ಮಾಡುವ ಕಾರ್ಯದಲ್ಲಿ ಎಷ್ಟರಮಟ್ಟಿಗೆ ತನ್ಮಯನಾಗುತ್ತಾನೆಂದರೆ, ತನ್ನ ಸುತ್ತಮುತ್ತಲಿನ ಪರಿಸರವನ್ನೇ ಮರೆತುಬಿಡುತ್ತಾನೆ. ಆದ್ದರಿಂದ ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಸಂಪೂರ್ಣ ಗಮನ ಮತ್ತು ಏಕಾಗ್ರತೆಯಿಂದ ನಿರ್ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪನ್ಯಾಸದ ನಂತರ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಯವರ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಬೆಂಗಳೂರಿನ ‘ಸಿಂಗಿಂಗ್ ದಿ ಸೇಂಟ್ಸ್’ ತಂಡದ ಕಲಾವಿದರಿಂದ ಸುಶ್ರಾವ್ಯ ಭಜನಾ ಕಾರ್ಯಕ್ರಮ ನೆರವೇರಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









