ಮಂಗಳೂರು : ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ‘ಜೋರ್ಜೀಸ್ ಸ್ಮಾರ್ಟ್ ಕ್ಲಾಸ್ ರೂಮ್’ (George’s Smart Classroom) ಅನ್ನು ಅದರ ಪ್ರವರ್ತಕರು ಹಾಗೂ ಬೋಧಕರಾದ ಅಮೆರಿಕದ ಪ್ರೊ. ಡಾ. ಕೃಷ್ಣ ಶೆಣೈ ಅವರು ನವೆಂಬರ್ 21ರಂದು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮಾತನಾಡಿ, ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದೊಂದಿಗೆ ತಮ್ಮ ಪ್ರತಿಭೆಯನ್ನು ಸಮನ್ವಯಗೊಳಿಸಿ ಭವಿಷ್ಯ ರೂಪಿಸಿಕೊಳ್ಳುವ ಬಗೆಯನ್ನು ವಿವರಿಸಿ ಶುಭ ಹಾರೈಸಿದರು.
ಬಳಿಕ ಡಾ. ಕೃಷ್ಣ ಶೆಣೈ ಅವರು, ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಭಾರತೀಯ ಸಿದ್ಧಾಂತ ಮತ್ತು ಮೌಲ್ಯಗಳನ್ನು ಆಧುನಿಕ ಕಾಲಘಟ್ಟಕ್ಕೆ ಪೂರಕವಾಗಿ ಸಮೀಕರಿಸಿ ಪ್ರಸ್ತುತಪಡಿಸಿದರು. ನೂತನ ಸ್ಮಾರ್ಟ್ ಕ್ಲಾಸ್ ರೂಮ್ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನವೀನ ವಿಜ್ಞಾನ ಆವಿಷ್ಕಾರಗಳನ್ನು ತುಲನಾತ್ಮಕ ದೃಷ್ಟಿಕೋನದಲ್ಲಿ ಪ್ರಾತ್ಯಕ್ಷಿಕೆ ಹಾಗೂ ಪ್ರಾಯೋಗಿಕ ವಿಧಾನಗಳ ಮೂಲಕ ಮನಮುಟ್ಟುವಂತೆ ವಿವರಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ವಿಶ್ವಸ್ಥ ಮಂಡಳಿ ಸದಸ್ಯ ಹಾಗೂ ಖಜಾಂಚಿ ಬಿ.ಆರ್. ಭಟ್, ಮುಖ್ಯ ಆಡಳಿತಾಧಿಕಾರಿ (ಸಿಎಒ) ಡಾ. ಬಿ. ದೇವದಾಸ ಪೈ, ಶ್ರೀಮತಿ ಲೀಲಾ ಕೃಷ್ಣ ಶೆಣೈ ಸೇರಿದಂತೆ ಮೂಲ್ಕಿಯ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಶ್ರೀಮತಿ ಲಕ್ಷ್ಮೀ ಕಿಣಿ ಪ್ರಾರ್ಥಿಸಿದರೆ, ಎಂ.ಆರ್. ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕೊಂಕಣಿ ಕೇಂದ್ರ, ಅಮೆರಿಕದ ಕೊಂಕಣಿ ಚಾರಿಟೇಬಲ್ ಫಂಡ್ ಹಾಗೂ ಪೊಸಾರ್ ಹರಿ ಶೆಣೈ ಚಾರಿಟೇಬಲ್ ಫಂಡ್ ಸಹಯೋಗದಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮವು ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









