ಮಂಗಳೂರು : ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಜಂಟಿ ಆಶ್ರಯದಲ್ಲಿ, ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ವಸತಿ ಸಹಿತ ‘ಪ್ರಗತಿ ಸ್ಪೂರ್ತಿ ಮತ್ತು ಉನ್ನತಿ–2026’ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಂಗ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು, ಜೀವನ ಕೌಶಲ್ಯ ಹಾಗೂ ಸರ್ವತೋಮುಖ ಪ್ರಗತಿಯನ್ನು ಮೂಡಿಸುವ ಗುರಿ ಹೊಂದಿದ ಈ ಶಿಬಿರದ ಮೂರು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಯಾದ ಕು. ಮೇಘನಾ ಕುಂದಾಪುರ ಪಂಗಡದವರು ರಂಗಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು. ರಂಗಭೂಮಿಯ ಕಲೆಯು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪರೋಕ್ಷವಾಗಿ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ವಿವರಿಸಿದ ಅವರು, ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಸರಿಹಾದಿಯಲ್ಲಿ ಪ್ರದರ್ಶಿಸುವ ತಂತ್ರಗಳನ್ನು ಮನವರಿಕೆ ಮಾಡಿಕೊಟ್ಟರು.
ಈ ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಕೇವಲ ಸೈದ್ಧಾಂತಿಕ ಮಾಹಿತಿಯನ್ನಷ್ಟೇ ನೀಡದೆ, ಪ್ರಾಯೋಗಿಕವಾಗಿ ರಂಗ ಅಭ್ಯಾಸದಲ್ಲಿ ತೊಡಗಿಸಲಾಯಿತು. ಸಂಗೀತದ ಹಿನ್ನೆಲೆಯಲ್ಲಿ ನಾಟಕದ ದೃಶ್ಯಗಳನ್ನು ಸೃಷ್ಟಿಸುವುದು, ವಿವಿಧ ಪಾತ್ರಗಳ ಪೋಷಣೆ, ರಂಗ ತಾಲೀಮು, ನೃತ್ಯ ಮತ್ತು ಸಂಗೀತದ ಸಂಯೋಜನೆ, ಸಂಭಾಷಣೆ ಚಾತುರ್ಯ, ಹಾವ-ಭಾವಗಳ ಪ್ರದರ್ಶನ, ಪಾತ್ರಗಳಿಗೆ ತಕ್ಕಂತೆ ಹೊಂದಾಣಿಕೆ ಹಾಗೂ ಧ್ವನಿ ಏರಿಳಿತದ ಸ್ವರಾಭ್ಯಾಸ ಸೇರಿದಂತೆ ರಂಗಭೂಮಿಯ ಹಲವು ಆಯಾಮಗಳ ಬಗ್ಗೆ ಮಕ್ಕಳಿಗೆ ಸವಿವರವಾದ ಜ್ಞಾನ ಧಾರೆ ಎರೆಯಲಾಯಿತು.
ಈ ಮಹತ್ವದ ರಂಗ ಚಟುವಟಿಕೆಯ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈ, ಉಪಾಧ್ಯಕ್ಷರಾದ ಡಿ ರಮೇಶ ನಾಯಕ್ ಮೈರಾ ಹಾಗೂ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ ಉಪಸ್ಥಿತರಿದ್ದರು. ಇವರೊಂದಿಗೆ ಸುಚಿತ್ರಾ ರಮೇಶ್ ನಾಯಕ್, ಡಾ. ವಿಜಯಲಕ್ಶ್ಮಿ ನಾಯಕ್, ಲಕ್ಷ್ಮಿ ಕಿಣಿ, ರವೀಂದ್ರ ನಾಯಕ್ ಕುಂಟಲ್ಪಾಡಿ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ಸಂದೀಪ್ ಪ್ರಭು ವಗ್ಗ, ಶಿವರಾಂ ಪ್ರಭು ಮಾರಿಬೆಟ್ಟು, ಗಣೇಶ್ ಪ್ರಭು, ಸುಜಾತ ಪ್ರಭು, ವಿಜಯಶೆಣೈ ಕೊಡಂಗೆ, ಗೋಪಾಲ ಸಾಮಂತ್, ನಾಗೇಶ ನಾಯಕ್ ಕುಂಟಲ್ಪಾಡಿ, ರಾಜೇಶ್ ಪ್ರಭು ಬನ್ನೂರು, ಮುರಳೀಧರ ಪ್ರಭು ವಗ್ಗ, ಅಕ್ಷತಾ ನಾಯಕ್ ಮತ್ತು ಗೌತಮಿ ನಾಯಕ ಕಡೇಶ್ವಾಲಯ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










