ಶಕ್ತಿನಗರ : ವಿಶ್ವ ಕೊಂಕಣಿ ಕೇಂದ್ರವು ವರ್ಧನಿ ಫೆಲೋಶಿಪ್ ಅಡಿಯಲ್ಲಿ ಪ್ರಾರಂಭಿಸಿರುವ “ಗೋವಾದಲ್ಲಿ ಮಾತೃದೇವಿಯರ ಉಪಾಸನೆ”ಯೆಂಬ ಸಂಶೋಧನಾ ಯೋಜನೆಯ ಕಾರ್ಯಕ್ರಮವನ್ನು, ಗೋವಾದ ಇತಿಹಾಸ ತಜ್ಞ ಡಾ. ರೋಹಿತ್ ಫಳಗಾಂವಕಾರ್ ಅವರು ಉದ್ಘಾಟಿಸಿದರು. ಮತ್ತು ತಮ್ಮ ಸಂಶೋಧನಾ ಯೋಜನೆಯ ಬಗ್ಗೆ ಉಪನ್ಯಾಸ ನೀಡುತ್ತಾ, ಅನಾದಿ ಕಾಲದಿಂದಲೂ ಕೊಂಕಣಿ ಭಾಷಿಕರ ನಡುವೆ ನಿಚ್ಚಳವಾಗಿರುವ ಮಾತೃಶಕ್ತಿಯ ಆರಾಧನೆಗೆ ಸೂಕ್ತ ಸಂಶೋಧನಾತ್ಮಕ ಸ್ಪರ್ಶದ ಅಗತ್ಯವಿದ್ದು, ಅಂತಹ ಒಂದು ಅಧ್ಯಯನ ಯೋಜನೆಯನ್ನು ವಿಶ್ವಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿದೆ. ಈ ಸಂಶೋಧನಾ ಕಾರ್ಯಯೋಜನೆಯು ಮುಕ್ತಾಯದ ಹಂತದಲ್ಲಿದ್ದು ವಿಶ್ವ ಕೊಂಕಣಿ ಕೇಂದ್ರ ಹಾಗೂ ವರ್ಧನಿ ಫೆಲೋಶಿಪ್ ಸಂಸ್ಥೆಯ ಕಾರ್ಯ ವೈಖರಿಯು ಪ್ರಶಂಶನೀಯವೆಂದು ಅಬಿಪ್ರಾಯಪಟ್ಟರು.
ಇವರು ಗೋವಾದ ಹಲವಾರು ದೇವಿಮಂದಿರಗಳು, ಅಮೂರ್ಥ ಕಲ್ಪನೆಗಳು ಹಾಗೂ ಮೂರ್ತಿ ರೂಪದ ದೇವೀ ವಿಗ್ರಹಗಳ ಚಿತ್ರ ಪ್ರದರ್ಶನಗಳ ಮೇಲೆ ಉಪನ್ಯಾಸ ನೀಡಿದರು. ಹಾಗೂ ಗೋವಾದ ಮಾತೃ ದೇವಿಯ ಉಪಾಸನೆಗಳ ಬಗ್ಗೆ ಸುಮಾರು 67 ವಿವಿಧ ದೇವಾಲಯಗಳಲ್ಲಿ ಜರಗುವ ಸಾಂಪ್ರದಾಯಿಕ ಆರಾಧನೆ ನಂಬಿಕೆಗಳ ಕುರಿತು ಶಾಸ್ತ್ರೀಯ ವಿಧಾನದ ವ್ಯಾಸಂಗಿಕ ಅಧ್ಯಯನಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ಸಿಎ ನಂದಗೋಪಾಲ್ ಶೆಣೈ ಯವರು ಸ್ವಾಗತಿಸಿದರು. ವರ್ಧನಿ ಸಂಸ್ಥೆಯು ಈ ಸಂಶೋಧನಾ ಪುಸ್ತಕ ರಚನಾ ವೆಚ್ಚವನ್ನು ಪ್ರಾಯೋಜಿಸಲಿದ್ದು, ಸಂಶೋಧಕ ಡಾ. ರೋಹಿತ್ ಫಳಗಾಂವಕಾರ್ ರವರು ಕಾರ್ಯರೂಪಕ್ಕೆ ತರಲಿರುವ ಸಂಶೋಧನಾ ಪುಸ್ತಕವನ್ನು ಕೇಂದ್ರದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಸಂಶೋಧಕರ ಡಾ. ರೋಹಿತ್ ಫಳಗಾಂವಕಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಪುಂಡಳೀಕ ಪೈ (ಅನ್ನು ಮಂಗಳೂರು) ಇವರು, ಸುಮಾರು ಒಂದು ವರ್ಷ ಅವಧಿಯ ಈ ಸಂಶೋಧನೆಗೆ ಪೂರಕವಾದ, ನಾಜೂಕಿನ ಛಾಯಾಚಿತ್ರಗಾರಿಕೆ ನಡೆಸಿದ್ದು, ಒಂದು ಸುಂದರ ಕಾಫಿಟೆಬಲ್ ಪುಸ್ತಕದ ರೂಪದಲ್ಲಿ ಬರಲಿರುವ ಬಗ್ಗೆ ವಿವರಗಳನ್ನು ಸಭೆಗೆ ನೀಡಿದರು. ಇವರ ಕಾರ್ಯವನ್ನು ಶ್ಲಾಘಿಸುತ್ತಾ ಕೇಂದ್ರದ ವಿಶ್ವಸ್ಥ ಮಂಡಳಿಯು ಸನ್ಮಾನಿಸಿ ಗೌರವಿಸಿತು. ಶ್ರೀಮತಿ ಸುಚಿತ್ರಾ ಎಸ್ ಶೆಣೈ ಇವರು ಅಧ್ಯಯನ ಯೋಜನೆಯ ಸಂಶೋಧಕ ಡಾ ರೋಹಿತ್ರ ಸಂಕ್ಷಿಪ್ತ ಪರಿಚಯ ನೀಡಿದರು ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಶ್ರೀ ಬಿ ಆರ್ ಭಟ್ ವಂದನಾರ್ಪಣೆ ನಡೆಸಿಕೊಟ್ಟರು. ವಿಶ್ವಸ್ಥ ಮಂಡಳಿಯ ಶ್ರೀ ಪ್ರಶಾಂತ ಶೇಟ್, ಉಪಾಧ್ಯಕ್ಷ ಶ್ರೀ ಡಿ ರಮೇಶ ನಾಯಕ್ ಹಾಗೂ ಶ್ರೀಮತಿ ಉಷಾ ನಂದಗೋಪಾಲ ಶೆಣೈ, ಶ್ರೀ ಪಯ್ಯನೂರು ರಮೇಶ ಪೈ, ಅಮೇರಿಕಾದ ಶ್ರೀ ಎಸ್ ಗಣೇಶ ಶೆಣೈ, ಕುಡಾಳ ದೇಶ ಆದ್ಯ ಗೌಡ ಬ್ರಾಹ್ಮಣ ಸೇವಾ ಸಂಘ ಹಾಗೂ ಚಪ್ಟೇಕಾರ ಸಮಾಜ ಸುಧಾರಕ ಸಂಘದ ಪ್ರಮುಖರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









