ಮಂಗಳೂರು : ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರ, ಆಳ ಸಮುದ್ರದ ಅಲೆಯ ಏರಿಳಿತದಲ್ಲಿ ಹನ್ನೊಂದು ದಿನಗಳ ಕಾಲ ಗೋವಾದ ‘ಐಎಫ್ಬಿ ಸಂತ್ ಆಂಟನ್-ಐ’ ದೋಣಿಯಲ್ಲಿದ್ದ 31 ಮೀನುಗಾರರು ಮೃತ್ಯು ಭಯದಲ್ಲಿದ್ದರು.
ದೋಣಿಯ ಸ್ಟೀಯರಿಂಗ್ ಗೇರ್ ಸಂಪೂರ್ಣವಾಗಿ ಕೈಕೊಟ್ಟಿತ್ತು. ದೋಣಿಯ ನಿಯಂತ್ರಣ ತಪ್ಪಿ, ದಿಕ್ಕಿಲ್ಲದ ಹಡಗಿನಂತೆ ಸಮುದ್ರದಲ್ಲಿ ತೇಲಾಡುತ್ತಿತ್ತು. ಈ ಅಪಾಯಕಾರಿ ತಾಂತ್ರಿಕ ದೋಷ ಹಾಗೂ ಪ್ರತಿಕೂಲ ಹವಾಮಾನದ ಸವಾಲಿಗೆ ಮಣಿದು, ಮೀನುಗಾರರು ಸಹಾಯಕ್ಕಾಗಿ ಕಾಯುತ್ತಿದ್ದರು.
ಭಾರತೀಯ ಕೋಸ್ಟ್ ಗಾರ್ಡ್ಗೆ ಈ ಸಂಕಷ್ಟದ ಬಗ್ಗೆ ಮಾಹಿತಿ ತಲುಪುತ್ತಿದ್ದಂತೆಯೇ, ಅವರು ಕ್ಷಣ ಮಾತ್ರವೂ ವಿಳಂಬ ಮಾಡಲಿಲ್ಲ. “ಮೀನುಗಾರರ ಇರುವಿಕೆಯನ್ನು ಪತ್ತೆಹಚ್ಚಲು ಮತ್ತು ಅವರಿಗೆ ತುರ್ತು ನೆರವು ನೀಡಲು ತಕ್ಷಣದ ಕ್ರಮ ಕೈಗೊಳ್ಳಲಾಯಿತು,” ಎಂದು ಐಸಿಜಿ ವಕ್ತಾರರು ತಿಳಿಸಿದ್ದಾರೆ.
ಐಸಿಜಿಎಸ್ ಕಸ್ತೂರ್ಬಾ ಗಾಂಧಿ ನೌಕೆ ಮತ್ತು ಕೊಚ್ಚಿಯ ಕರಾವಳಿ ರಕ್ಷಣಾ ದಳದ ಡೊರ್ನಿಯರ್ ವಿಮಾನದ ಮೂಲಕ ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು.
ಅಕ್ಟೋಬರ್ 25 ರಂದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಅಂತಿಮವಾಗಿ ಸಂಕಷ್ಟದಲ್ಲಿದ್ದ ದೋಣಿಯನ್ನು ತಲುಪಿದರು. ಈ ರಕ್ಷಣಾ ಪಡೆ ಕೇವಲ ಜನರನ್ನು ರಕ್ಷಿಸಲಿಲ್ಲ, ಬದಲಿಗೆ ಸಮುದ್ರದ ಮಧ್ಯದಲ್ಲೇ ದೋಣಿಗೆ ಜೀವ ತುಂಬಿದರು! ಸಮುದ್ರದ ನಡುವೆಯೇ ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ಒದಗಿಸಿ, ಅವರು ಅಪಾಯಕಾರಿಯಾದ ಸ್ಟೀರಿಂಗ್ ದೋಷವನ್ನು ಯಶಸ್ವಿಯಾಗಿ ಸರಿಪಡಿಸಿದರು.
ದುರಸ್ತಿ ಕಾರ್ಯ ಮುಗಿದ ನಂತರ, ದೋಣಿಯನ್ನು ಎಳೆದುಕೊಂಡು ಹೋಗಿ ಹೊನ್ನಾವರ ಮೀನುಗಾರಿಕಾ ಬಂದರಿಗೆ ಸುರಕ್ಷಿತವಾಗಿ ತಲುಪಿಸಲಾಯಿತು. ಅಧಿಕಾರಿಗಳ ಪ್ರಕಾರ, “ಮೀನುಗಾರರು ದೀರ್ಘಾವಧಿಯ ಸಂಕಷ್ಟದಿಂದಾಗಿ ದಣಿದಿದ್ದರೂ, ಸುರಕ್ಷಿತವಾಗಿದ್ದರು. ನಮ್ಮ ತಂಡಗಳು ಅವರಿಗೆ ವೈದ್ಯಕೀಯ ನೆರವು ಮತ್ತು ಅಗತ್ಯ ಸಾಮಗ್ರಿಗಳನ್ನು ಒದಗಿಸಿ ಉಪಚರಿಸಿದೆ.”
ಒಟ್ಟಿನಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಛಲದಿಂದಾಗಿ, 31 ಜೀವಗಳು ಅಪಾಯದಿಂದ ಪಾರಾಗಿ ತಮ್ಮ ಮನೆ ಸೇರಲು ಸಾಧ್ಯವಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









