ಮಂಗಳೂರು : ವಿದೇಶಿ ಕಾಯ್ದೆ ಉಲ್ಲಂಘನೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 12 ವರ್ಷಗಳಿಂದ ಕಾನೂನಿನ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಉಡುಪಿ ನಿವಾಸಿಯಾದ 59 ವರ್ಷದ ತಾಜ್ ಮೊಹಮ್ಮದ್ ಯುಸೂಫ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ 2014ರಲ್ಲಿಯೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ‘ವಿದೇಶಿ ಕಾಯ್ದೆ’ (Foreigners Act) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ದಶಕಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಈತನ ಪತ್ತೆಗಾಗಿ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದರು.
ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ (ASP) ಯಶ್ ಕುಮಾರ್ ಶರ್ಮಾ ಅವರ ನೇರ ನಿರ್ದೇಶನ ಹಾಗೂ ಉಪ ನಿರೀಕ್ಷಕರುಗಳಾದ ಮಂಜುನಾಥ ಟಿ ಮತ್ತು ಕೃಷ್ಣಕಾಂತ ಕೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ವಿಶೇಷ ತಂಡ ರಚಿಸಿಕೊಂಡಿದ್ದ ಸಿಬ್ಬಂದಿಗಳಾದ ಶಿವಾನಂದ ಮಡ್ಡಿ, ಶಿದ್ದಪ್ಪ ಮತ್ತು ಪ್ರವೀಣ್ ಅವರು ಖಚಿತ ಮಾಹಿತಿಯ ಮೇರೆಗೆ ಉಡುಪಿಯ ಕಾರ್ಕಳ ಪರಿಸರದಲ್ಲಿ ದಾಳಿ ನಡೆಸಿ ಆರೋಪಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯು ದೀರ್ಘಕಾಲದ ಬಾಕಿ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರ ದಕ್ಷತೆಗೆ ಸಾಕ್ಷಿಯಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









