ಮಂಗಳೂರು : ನಗರದ ಖಾಸಗಿ ಬಸ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲಾಗಿದ್ದು, ಮೊದಲ ಬಾರಿಗೆ ಪರಿಸರ ಸ್ನೇಹಿ ಹವಾನಿಯಂತ್ರಿತ (AC) ಎಲೆಕ್ಟ್ರಿಕ್ ಬಸ್ ಸೇವೆಯನ್ನು ಪರಿಚಯಿಸಲಾಗಿದೆ. ನಗರದ ಮೊರ್ಗನ್ ಗೇಟ್ ಪಾಲೆ ಮಾರ್ ಗಾರ್ಡನ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ನೂತನ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಮಂಗಳೂರು ನಗರದ ಪ್ರಮುಖ ಮಾರ್ಗವಾದ ರೂಟ್ ನಂಬರ್ 27ರಲ್ಲಿ ಸಂಚರಿಸುವ ಬಸ್ಗಳ ಪೈಕಿ ಈ ಎಲೆಕ್ಟ್ರಿಕ್ ಬಸ್ ಪ್ರಥಮ ಬಾರಿಗೆ ಕಾರ್ಯಾಚರಣೆ ಆರಂಭಿಸಿದ್ದು, ಪ್ರಯಾಣಿಕರಿಗೆ ಆಧುನಿಕ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ.
ಶಾಸಕ ವೇದವ್ಯಾಸ ಕಾಮತ್ ಅವರು ಈ ಹೊಸ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್ಗಳ ಆಗಮನವು ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಸ್ ಮಾಲಕ ದಿಲ್ ರಾಜ್, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಸೇರಿದಂತೆ ಹಲವು ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು, ಮಂಗಳೂರಿನ ಖಾಸಗಿ ಸಾರಿಗೆಯಲ್ಲಿನ ಈ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷಿಯಾದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









