ಮಂಗಳೂರು : ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಎಸ್ಡಿಎ ಲೋಕಾಯುಕ್ತ ಬಲೆಗೆ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಪ್ರಥಮ ದರ್ಜೆ ಇಲೆಕ್ಟ್ರಿಕಲ್ ಗುತ್ತಿಗೆದಾರರಿಂದ ಬಿಲ್ ಪಾವತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಗಳೂರು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ (SDA) ಸಂಪತ್ ಎಂಬುವವರನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ. ದೂರುದಾರರು 2025ನೇ ಸಾಲಿನಲ್ಲಿ ನಿರ್ವಹಿಸಿದ ಕೆಲಸದ ಬಿಲ್ ಬಿಡುಗಡೆ ಮಾಡಲು ಒಟ್ಟು ಮೊತ್ತದ ಶೇ. 4ರಷ್ಟು ಅಂದರೆ 22,600 ರೂಪಾಯಿಗಳನ್ನು ನೀಡಬೇಕು ಎಂದು ಸಂಪತ್ ಒತ್ತಾಯಿಸಿದ್ದರು.
ಮಂಗಳೂರಿನ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಈ ಭ್ರಷ್ಟಾಚಾರದ ಜಾಲ ಬಯಲಾಗಿದೆ. ಈ ಸಂಬಂಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫೆಬ್ರವರಿ 2ರಂದು ಆರೋಪಿ ಸಂಪತ್ ದೂರುದಾರರಿಂದ ನಿಗದಿಪಡಿಸಿದ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಈ ಯಶಸ್ವಿ ಕಾರ್ಯಾಚರಣೆಯು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಡಿವೈಎಸ್ಪಿಗಳಾದ ಸುರೇಶ್ ಕುಮಾರ್ ಪಿ. ಮತ್ತು ಡಾ. ಗಾನ ಪಿ. ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ, ಇನ್ಸ್ಪೆಕ್ಟರ್ ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್ ಸೇರಿದಂತೆ ತಂಡದ ಇತರ ಸದಸ್ಯರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









