ಮಂಗಳೂರು : ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆ ಬಳಿಯ ನೇತ್ರಾವತಿ ನದಿ ತೀರದಲ್ಲಿ ಸಾವಿರಾರು ಆಧಾರ್ ಕಾರ್ಡ್ಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ನದಿ ತಟದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಂಚಾಯತ್ ಅಧ್ಯಕ್ಷರು ಮತ್ತು ಸಾರ್ವಜನಿಕರು ನದಿ ತೀರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸಾವಿರಾರು ಕಾರ್ಡ್ಗಳನ್ನು ಸಂಗ್ರಹಿಸಿದ್ದಾರೆ. ಜನರ ಅತ್ಯಂತ ಪ್ರಮುಖ ವೈಯಕ್ತಿಕ ದಾಖಲೆಗಳು ಈ ರೀತಿ ನದಿ ಪಾಲಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ. ಖಾದರ್ ಅವರು, ಇಷ್ಟೊಂದು ಬೃಹತ್ ಪ್ರಮಾಣದ ಆಧಾರ್ ಕಾರ್ಡ್ಗಳು ನದಿ ತೀರಕ್ಕೆ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದೊಂದು ಗಂಭೀರ ನಿರ್ಲಕ್ಷ್ಯವೋ ಅಥವಾ ಇದರ ಹಿಂದೆ ಯಾವುದಾದರೂ ದುರುದ್ದೇಶವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಸಾರ್ವಜನಿಕರ ವೈಯಕ್ತಿಕ ಮಾಹಿತಿಯ ಭದ್ರತೆಯ ವಿಷಯದಲ್ಲಿ ಇಂತಹ ಬೇಜವಾಬ್ದಾರಿತನ ತೋರಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಪೊಲೀಸರಿಗೆ ಸೂಚಿಸಿರುವ ಯು.ಟಿ. ಖಾದರ್ ಅವರು, ಈ ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸಾರ್ವಜನಿಕರ ಪ್ರಮುಖ ದಾಖಲೆಗಳ ರಕ್ಷಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪತ್ತೆಯಾದ ಕಾರ್ಡ್ಗಳ ಅಸಲಿಯತ್ತು ಮತ್ತು ಈ ಅವಾಂತರಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









