ಮಂಗಳೂರು : ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ ದಶಕಗಳಿಂದ ಮೀನು ವ್ಯಾಪಾರ ಮಾಡುತ್ತಿರುವ ಮಹಿಳೆಯರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಗುಡುಗಿರುವ ವ್ಯಾಪಾರಸ್ಥರು, “ನಮ್ಮ ಸಂಸಾರವನ್ನು ಬೀದಿಗೆ ತಳ್ಳಿದವರ ಮನೆ ಬಾಗಿಲಿಗೆ ಹೋಗಿ ನಾವು ಮೀನು ಮಾರಾಟ ಮಾಡುತ್ತೇವೆಯೇ ಹೊರತು, ಹೊಸದಾಗಿ ನಿರ್ಮಿಸಿರುವ ಸೆಂಟ್ರಲ್ ಮಾರುಕಟ್ಟೆಗೆ ಮಾತ್ರ ಹೋಗುವುದಿಲ್ಲ” ಎಂದು ಕಡಕ್ ಆಗಿ ಎಚ್ಚರಿಸಿದ್ದಾರೆ. ತಲೆತಲಾಂತರದಿಂದ ಇದೇ ಜಾಗದಲ್ಲಿ ಬದುಕು ಕಟ್ಟಿಕೊಂಡಿರುವ ನಮಗೆ ಈ ಮಾರುಕಟ್ಟೆಯ ಮೇಲೆಯೇ ಭಾವನಾತ್ಮಕ ಸಂಬಂಧವಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಪಾಲಿಕೆಯ ಅಧಿಕಾರಿಗಳು ಹೊಸ ಮಾರುಕಟ್ಟೆಗೆ ಸ್ಥಳಾಂತರವಾಗುವಂತೆ ಒತ್ತಡ ಹೇರುತ್ತಿದ್ದರೂ, ಮೀನುಗಾರ ಮಹಿಳೆಯರು ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. “ಸತ್ತರೂ ನಾವು ಇದೇ ಮಾರುಕಟ್ಟೆಯಲ್ಲೇ ಸಾಯುತ್ತೇವೆಯೇ ಹೊರತು ಬೇರೆಲ್ಲಿಗೂ ಹೋಗುವುದಿಲ್ಲ” ಎಂದು ಭಾವುಕರಾಗಿ ನುಡಿದಿದ್ದಾರೆ. ಸುಸಜ್ಜಿತ ಎನ್ನಲಾಗುವ ಹೊಸ ಕಟ್ಟಡಕ್ಕಿಂತ ಹೆಚ್ಚಾಗಿ, ಪ್ರಸ್ತುತ ತಾವು ವ್ಯಾಪಾರ ಮಾಡುತ್ತಿರುವ ಹಳೆಯ ಮಾರುಕಟ್ಟೆಯನ್ನೇ ಸರಿಯಾಗಿ ದುರಸ್ತಿ ಮಾಡಿಕೊಡಲಿ ಎಂಬುದು ಇವರ ಪ್ರಬಲ ಆಗ್ರಹವಾಗಿದೆ. ಮೂಲಸೌಕರ್ಯಗಳನ್ನು ಸರಿಪಡಿಸಿ ಇದೇ ಜಾಗದಲ್ಲಿ ಮುಂದುವರಿಯಲು ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









